Afzalpur | ವಿದ್ಯುತ್ ತಂತಿ ತುಂಡಾಗಿ ಕಬ್ಬಿನ ಗದ್ದೆಗೆ ಬೆಂಕಿ; 5 ಎಕರೆ ಬೆಳೆ ಭಸ್ಮ
ಜೆಸ್ಕಾಂ ನಿರ್ಲಕ್ಷ್ಯ ಆರೋಪ; ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ
ಅಫಜಲಪುರ : ತಾಲೂಕಿನ ಬಳೂಂಡಗಿ ಗ್ರಾಮದ ಸರ್ವೇ ನಂ. 677/2/1ರಲ್ಲಿ ವಿದ್ಯುತ್ ತಂತಿ ತುಂಡಾಗಿ ಕಬ್ಬಿನ ಗದ್ದೆಗೆ ಬಿದ್ದ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು ಐದು ಎಕರೆ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಅಫಜಲಪುರ ಪಟ್ಟಣದ ರೈತ ಸೈಯ್ಯದ್ ಆಯಾಜ್ ಖಾಜಿ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಗೊಂಡು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದ ತಕ್ಷಣ ಉಂಟಾದ ಕಿಡಿ ಕ್ಷಣಾರ್ಧದಲ್ಲೇ ಒಣಗಿದ್ದ ಕಬ್ಬಿನ ಬೆಳೆಗೆ ವ್ಯಾಪಿಸಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ ಅಷ್ಟರಲ್ಲೇ ಸುಮಾರು ಐದು ಎಕರೆ ಪ್ರದೇಶದ ಕಬ್ಬಿನ ಬೆಳೆ ಸಂಪೂರ್ಣ ಹಾಗೂ ಭಾಗಶಃ ಸುಟ್ಟುಹೋಗಿದೆ.
ರೈತ ಸೈಯ್ಯದ್ ಆಯಾಜ್ ಖಾಜಿ ಮಾತನಾಡಿ, ಮಳೆಯ ಕೊರತೆಯಿಂದಲೇ ರೈತರು ಸಂಕಷ್ಟದಲ್ಲಿರುವಾಗ ಅಲ್ಪ ಪ್ರಮಾಣದ ನೀರಿನಲ್ಲಿ ಬೆಳೆ ಬೆಳೆಸಿದ್ದ ಕಬ್ಬು ಸಂಪೂರ್ಣ ಹಾನಿಗೊಂಡಿದೆ. ಇದರಿಂದ ತಮ್ಮ ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ ಎಂದು ಅಳಲು ತೋಡಿಕೊಂಡರು.
ಈ ಅವಘಡಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ರೈತರು, ಇದೇ ಸ್ಥಳದಲ್ಲಿ ವಿದ್ಯುತ್ ತಂತಿ ತುಂಡಾಗಿ ಬೀಳುತ್ತಿರುವುದು ಇದು ಮೂರನೇ ಘಟನೆ ಎಂದು ದೂರಿದರು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಶಾಶ್ವತ ಕ್ರಮ ಕೈಗೊಳ್ಳದಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.