Kalaburagi | ಜು.20ರಿಂದ ಒಸಡು ಕಸಿ ಉಚಿತ ಚಿಕಿತ್ಸಾ ಶಿಬಿರ: ಡಾ.ಜಯಶ್ರೀ ಮುದ್ದಾ
ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್. ನಿಜಲಿಂಗಪ್ಪ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪೆರಿಯೋಡಾಂಟಾಲಜಿ ಮತ್ತು ಇಂಪ್ಲಾಂಟಾಲಜಿ ವಿಭಾಗದ ವತಿಯಿಂದ ಒಸಡು ಹಿಂದೆ ಸರಿಯುವಿಕೆ ಹಾಗೂ ಒಸಡು ಕುಗ್ಗುವ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ಒಸಡು ಕಸಿ (ಗಮ್ ಗ್ರಾಫ್ಟ್) ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಸಂಸ್ಥೆಯ ಪ್ರಾಚಾರ್ಯರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಮುದ್ದಾ ಅವರು ನೀಡಿದ ಮಾಹಿತಿಯಂತೆ, ಜುಲೈ 20ರಿಂದ 31ರವರೆಗೆ ಸೇಡಂ ರಸ್ತೆಯಲ್ಲಿರುವ ಎಸ್. ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಆವರಣದಲ್ಲಿ ಶಿಬಿರ ನಡೆಯಲಿದೆ.
ಒಸಡು ಕಸಿ ಚಿಕಿತ್ಸೆಯು ಹಲ್ಲಿನ ಬೇರುಗಳನ್ನು ರಕ್ಷಿಸುವುದು, ಹಲ್ಲಿನ ಸೂಕ್ಷ್ಮತೆಯನ್ನು ಕಡಿಮೆ ಮಾಡುವುದು ಹಾಗೂ ನಗುವಿನ ಸೌಂದರ್ಯವನ್ನು ಹೆಚ್ಚಿಸುವ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಒಸಡು ಹಿಂದೆ ಸರಿಯುವುದು, ಹಲ್ಲಿನ ಬೇರುಗಳು ಗೋಚರಿಸುವುದು ಹಾಗೂ ಹಲ್ಲುಗಳಲ್ಲಿ ಅತಿಯಾದ ಸಂವೇದನೆ ಇರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಶಿಬಿರದಲ್ಲಿ ಅರ್ಹ ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ಅವಕಾಶಗಳು ಸೀಮಿತವಾಗಿರುವುದರಿಂದ ಆಸಕ್ತರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.