ವಾಡಿ | ಯುನಿಟಿ ಲಾರಿ ಮಾಲಕರ ಸಂಘದಲ್ಲಿ 30 ಲಕ್ಷ ರೂ. ಅವ್ಯವಹಾರ : ಆರೋಪ
ವಾಡಿ : ಪಟ್ಟಣದ ಯುನಿಟಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸುಮಾರು 30 ಲಕ್ಷ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಸಂಘದ ಹಿರಿಯ ಸದಸ್ಯ ರೀಚರ್ಡ್ ಮರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ರಾಜು ಕೋಲಿ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಲಾರಿ ಹೊಂದಿರುವ ಸುಮಾರು 50 ಸದಸ್ಯರಿಂದ ಸದಸ್ಯತ್ವ ಶುಲ್ಕದ ಹೆಸರಿನಲ್ಲಿ ತಲಾ 20 ಸಾವಿರ ರೂ. ಹಾಗೂ ಪ್ರತಿ ತಿಂಗಳು 600 ರೂ. ಸಂಗ್ರಹಿಸಲಾಗಿದ್ದು, ಒಂಬತ್ತು ವರ್ಷಗಳಾದರೂ ಸಂಘದ ಆದಾಯ-ವೆಚ್ಚದ ಲೆಕ್ಕ ನೀಡಿಲ್ಲ ಎಂದು ಆರೋಪಿಸಿದರು.
ಲೆಕ್ಕ ಕೇಳಿದಾಗ ಸಂಘದ ಅಧ್ಯಕ್ಷ ಶಂಕರಸಿಂಗ್ ರಾಠೋಡ, ಮೊಹಮ್ಮದ್ ಗೌಸ್, ಶಿವ ಮಹಾದೇವ, ಹಾಜಪ್ಪ ಕೋಲಿ ಮತ್ತು ಲಕ್ಷ್ಮಣ ಹಡಪದ ಸೇರಿದಂತೆ ಕೆಲವರು ಸದಸ್ಯರಿಗೆ ಮಾಹಿತಿ ನೀಡದೆ, ಯುನಿಟಿ ಲಾರಿ ಮಾಲೀಕರ ಸಂಘವನ್ನು ನಿಷ್ಕ್ರಿಯಗೊಳಿಸಿ “ಜಿಯೋ ಜೀನೇದೋ ಲಾರಿ ಮಾಲೀಕರ ಸಂಘ” ಎಂಬ ಹೊಸ ಸಂಘಟನೆ ಸ್ಥಾಪಿಸುವ ಮೂಲಕ ಸಂಘದ ಹಣವನ್ನು ಹಿಂದಿರುಗಿಸದಂತೆ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈಗಾಗಲೇ ದೂರು ಸಲ್ಲಿಸಲಾಗಿದ್ದು, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು. ಸುಮಾರು 60 ಸದಸ್ಯರು ತಮ್ಮ ಬೆಂಬಲದಲ್ಲಿದ್ದು, ಶೀಘ್ರದಲ್ಲೇ ಸರ್ವ ಸದಸ್ಯರ ಸಭೆ ಕರೆದು ಅವ್ಯವಹಾರದಲ್ಲಿ ತೊಡಗಿರುವವರನ್ನು ವಜಾಗೊಳಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸದಸ್ಯ ರಾಮು ರಾಠೋಡ, ಕಿಶನ್ ರಾಠೋಡ, ಶೇಖ್ ಅಲ್ಲಾವುದ್ದೀನ್, ಸಾಧಿಕ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.