Kalaburagi | ಶರಣಬಸವ ವಿಶ್ವವಿದ್ಯಾಲಯದ ವಿಶೇಷ ಉದ್ಯೋಗ ಮೇಳದಲ್ಲಿ 132 ವಿದ್ಯಾರ್ಥಿಗಳಿಗೆ ಉದ್ಯೋಗ
ಕಲಬುರಗಿ : ಶರಣಬಸವ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿಶೇಷ ಉದ್ಯೋಗ ಮೇಳದಲ್ಲಿ ವಿವಿಧ ವಿಶ್ವವಿದ್ಯಾಲಯಗಳ 132 ವಿದ್ಯಾರ್ಥಿಗಳು ಪ್ರತಿಷ್ಠಿತ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಯ್ಕೆಯಾದವರಿಗೆ ವಾರ್ಷಿಕ 3 ಲಕ್ಷ ರೂ. ನಿಂದ 4 ಲಕ್ಷ ರೂ. ವರೆಗೆ ವೇತನ ಪ್ಯಾಕೇಜ್ ಲಭಿಸಿದೆ.
ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕುಲಾಧಿಪತಿಗಳಾದ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ದೇಶದ 10ಕ್ಕೂ ಹೆಚ್ಚು ಪ್ರಮುಖ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಕಂಪನಿಗಳು ಭಾಗವಹಿಸಿದ್ದವು. ಶರಣಬಸವ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಆಯ್ಕೆಯಾದ 132 ವಿದ್ಯಾರ್ಥಿಗಳಲ್ಲಿ 127 ಮಂದಿ ಶರಣಬಸವ ವಿಶ್ವವಿದ್ಯಾಲಯದವರಾಗಿದ್ದು, ಬೀದರದ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಮೂವರು ಹಾಗೂ ರೇವಾ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ. ಶರಣಬಸವ ವಿವಿಯ ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ 62 ವಿದ್ಯಾರ್ಥಿನಿಯರು ಹಾಗೂ 65 ವಿದ್ಯಾರ್ಥಿಗಳು ಉದ್ಯೋಗ ಗಳಿಸಿರುವುದು ವಿಶೇಷ.
ಸೀಕ್ ನಿಯೋ-ಎಸ್‌ಡಬ್ಲ್ಯೂ, ಟ್ರೀಜೆಂಟ್ ಹಾಗೂ ಟೆಗಾಸಾಫ್ಟ್ ಸಂಸ್ಥೆಗಳು ವಾರ್ಷಿಕ 4 ಲಕ್ಷ ರೂ. ವೇತನದ ಉದ್ಯೋಗ ನೀಡಿದ್ದರೆ, ಎಂಆರ್‌ಎಫ್ ಟೈರ್ಸ್ 38, ಟಿವಿಎಸ್-ಉಪಾಸನೆ 16 ಹಾಗೂ ಕ್ಯಾಡ್‌ಮ್ಯಾಕ್ಸ್ 13 ವಿದ್ಯಾರ್ಥಿಗಳನ್ನು ವಾರ್ಷಿಕ 3 ಲಕ್ಷ ರೂ. ವೇತನದೊಂದಿಗೆ ನೇಮಕ ಮಾಡಿಕೊಂಡಿವೆ. ಜೇನಿತ್ರಾ ಸಂಸ್ಥೆ 45 ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಹ್ಯಾಪಿ ಮೈಂಡ್ ಎಐ ಸಂಸ್ಥೆ 16 ವಿದ್ಯಾರ್ಥಿಗಳಿಗೆ ವಾರ್ಷಿಕ 2 ಲಕ್ಷ ರೂ. ವೇತನದ ಉದ್ಯೋಗ ನೀಡಿದೆ.
ಈ ಸಾಧನೆಗೆ ಕಾರಣರಾದ ಬೋಧಕ ವೃಂದ ಹಾಗೂ ಅಧಿಕಾರಿಗಳನ್ನು ಕುಲಾಧಿಪತಿಗಳಾದ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಸೇರಿದಂತೆ ಆಡಳಿತ ಮಂಡಳಿ ಅಭಿನಂದಿಸಿದ್ದು, ವಿದ್ಯಾರ್ಥಿಗಳ ಸಾಧನೆ ವಿಶ್ವವಿದ್ಯಾಲಯದ ಉದ್ಯೋಗಮುಖಿ ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.