Afzalpur | ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಿಸುವುದು ನಮ್ಮ ಕರ್ತವ್ಯ: ಶಾಸಕ ಎಂ.ವೈ.ಪಾಟೀಲ್
ಅಫಜಲಪುರ: 1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಪಡೆದಿದ್ದು, ಮಹಾತ್ಮ ಗಾಂಧೀಜಿ ನೇತೃತ್ವದ ಅಸಹಕಾರ ಹಾಗೂ ನಾಗರಿಕ ಅಸಹಕಾರ ಚಳವಳಿಗಳು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗ ಹಾಗೂ ಕೋಟ್ಯಂತರ ಸಾಮಾನ್ಯ ನಾಗರಿಕರ ಹೋರಾಟದ ಫಲವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯವನ್ನು ಉಳಿಸಿ, ಬಲಪಡಿಸಲು ನೆರವಾದ ಕ್ರಾಂತಿಕಾರಿ ಆದರ್ಶಗಳು ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯುವುದರ ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸುವ ಉದ್ದೇಶದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ದೇಶ ಸ್ವಾತಂತ್ರ್ಯ ಪಡೆದು 80 ವರ್ಷಗಳು ಕಳೆದರೂ ಬಡತನ, ಜಾತೀಯತೆ ಹಾಗೂ ಅನಕ್ಷರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗದಿರುವುದು ನೋವಿನ ಸಂಗತಿಯಾಗಿದೆ. ಈ ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ,ತಾಪಂ ಇಓ ಶಂಕರ ರಾಠೋಡ,ಬಿಓ ಪ್ರತಿಭಾ ಪ್ರಿಯದರ್ಶಿನಿ, ಸಿಪಿಐ ಲಖನ್ ಮಸಗುಪ್ಪಿ, ರೇವಣಸಿದ್ದ ತಾವರಖೇಡ,ಎಸ್.ಎಚ್.ಗಡಗಿಮನಿ,ಕೆ.ಎಂ.ಕೋಟೆ, ಅಶೋಕ್ ನಾಯಕ್,ರವಿ ಅಂಬಲಗಿ, ಪಿಎಸ್ಐ ಸಂಗಮೇಶ ಅಂಗಡಿ,ನಿಂಗಪ್ಪ ಸಣ್ಣಕ್ಕಿ, ಲಕ್ಷ್ಮಿಕಾಂತ್ ಬಿರಾದಾರ, ಶಂಕರಗೌಡ ಪಾಟೀಲ್, ಸಂಜೀವಕುಮಾರ ಬಗಲಿ, ಮುಖಂಡರಾದ ಮತೀನ ಪಟೇಲ್, ರಮೇಶ್ ಪೂಜಾರಿ,ಮೋಶಿನ್ ಪಟೇಲ್, ಶಿವಾನಂದ ಗಾಡಿ ಸಾಹುಕಾರ,ಶ್ರೀಮಂತ ಬಿರಾದಾರ, ಚಂದ್ರಶೇಖರ ಕರಜಗಿ, ಸಾಯಿಬಣ್ಣ ಅಳ್ಳಗಿ, ರಾಜಕುಮಾರ ಉಕ್ಕಲಿ, ಮಹಾಂತೇಶ ಬಡದಾಳ, ಶಿವಪುತ್ರಪ್ಪ ಸಂಗೋಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.