×
Ad

ಆಳಂದ| ಪುಸ್ತಕ ಓದುವುದರಿಂದ ಸಂವೇದನಾಶೀಲ ವ್ಯಕ್ತಿತ್ವ ನಿರ್ಮಾಣ: ಬಿ.ಎಚ್.ನಿರಗುಡಿ

Update: 2025-11-21 12:05 IST

ಕಲಬುರಗಿ: ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂವೇದನಾಶೀಲ ವ್ಯಕ್ತಿತ್ವ ನಿರ್ಮಾಣ ಮಾಡಲು ಸಾಧ್ಯವಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಅಭಿಪ್ರಾಯಪಟ್ಟರು.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ ಕರ್ವಾಲೊ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಕ್ತಿ, ಸಮಾಜ ಹಾಗೂ ಜಗತ್ತಿನಲ್ಲಿ ಉತ್ತಮ ಪುಸ್ತಕಗಳು ಪರಿವರ್ತನೆ ತಂದಿವೆ, ನಮ್ಮಲ್ಲಿ ವೈಚಾರಿಕ ಚಿಂತನೆ, ಜ್ಞಾನ, ಅನುಭವ ಹಾಗೂ ಸಾಧನೆಗೆ ಇಂತಹ ಪುಸ್ತಕಗಳು ಪ್ರೇರಣೆಯಾಗಲಿವೆ. ಪುಸ್ತಕ ಪ್ರಾಧಿಕಾರವು ನಿರಂತರವಾಗಿ ಪುಸ್ತಕ ಪ್ರೀತಿ ಹೆಚ್ಚಿಸುವ ಸಂಸ್ಕೃತಿ ಬೆಳೆಸಲು ವಿನೂತನ ಕಾರ್ಯಕ್ರಮ ಕೈಗೊಳ್ಳುತ್ತಿದೆ ಎಂದರು.

ರಂಗಾಯಣದ ಮಾಜಿ ಅಧ್ಯಕ್ಷ ಪ್ರಭಾಕರ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದುವದು ಎಂದರೆ ಕೇವಲ ಸಾಹಿತ್ಯ, ಪುರಾಣ ಕತೆಗಳನ್ನು ಮಾತ್ರ ಓದುವದು ಅಲ್ಲ, ವಿಜ್ಞಾನ ತಂತ್ರಜ್ಞಾನ, ಸಂಗೀತ, ಕಲೆ ಸೇರಿದಂತೆ ನಮ್ಮ ಆಸಕ್ತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೆ ಅಂತಹ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿ, ಜ್ಞಾನಕ್ಕೆ ಪುಸ್ತಕಗಳು ಒದುವ ಹವ್ಯಾಸ ಬೆಳಸಿಕೊಳ್ಳಲು ತಿಳಿಸಿದರು.

ಕರ್ವಾಲೋ ಕಾದಂಬರಿ ಪುಸ್ತಕ ಪರಿಚಯಿಸಿದ ಉಪನ್ಯಾಸಕ ಸಂಜಯ ಪಾಟೀಲ ಅವರು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಮಲೆನಾಡಿನ ಪ್ರಾಕೃತಿಕ ಸಂಪತ್ತು, ಜೀವಸಂಕುಲವನ್ನು ಈ ಕಾದಂಬರಿಯಲ್ಲಿ ಪರಿಚಯಿಸಿದ್ದಾರೆ, ಕಾದಂಬರಿಯಲ್ಲಿ ಬರುವ ಮಂದಣ್ಣ, ಕರ್ವಾಲೊ, ಹಾರುವ ಓತಿ, ಕಿವಿ ಮುಂತಾದ ಪಾತ್ರಗಳ ಮೂಲಕ ಕಾದಂಬರಿಯು ತನ್ನ ಜೀವಂತಿಕೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂದರು.

ವಿದ್ಯಾರ್ಥಿನಿ ಮೋನಿಕಾ ಏಲಿಕೇರಿ, ಮೋನಿಕಾ ಸಲಗರ ಮಾತನಾಡಿದರು. ಪ್ರಾಂಶುಪಾಲ ಬಸವಂತರಾವ ಪಾಟೀಲ ಅಧ್ಯಕ್ಷತೆವಹಿಸಿದರು. ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಕುಂಬಾರ, ಶಂಕರ ಸೂರೆ, ಅಂಬಾಜಿ ಪಾಂಡೆ, ಶಿವಕುಮಾರ, ಪರಶುರಾಮ, ಬಸಪ್ಪ ಎಚ್., ಸಂಜಯ ಪೂಜಾರಿ ಉಪಸ್ಥಿತರಿದ್ದರು. ಇಂದಿರಮ್ಮ ಗಜೇಂದ್ರಘಡ ನಿರೂಪಿಸಿದರೆ, ವಿಜಯಲಕ್ಷ್ಮಿ ಸ್ವಾಗತಿಸಿದರು. ರಾಜಕುಮಾರ ಮಾಳಗೆ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News