Aland | ಬೈಕ್‌ನಿಂದ ಎಡೆಸಾಗು: ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ರೈತ
ಕೃಷಿ ಶ್ರಮ–ಸಮಯ ಉಳಿತಾಯಕ್ಕೆ ಹೊಸ ಪ್ರಯೋಗ
ಆಳಂದ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬದಲಾಗಿ ಆಧುನಿಕ ತಂತ್ರಜ್ಞಾನ ಹಾಗೂ ಯಾಂತ್ರೀಕರಣದತ್ತ ರೈತರು ಹೆಜ್ಜೆ ಇಡುತ್ತಿರುವ ದೃಶ್ಯ ತಾಲೂಕಿನ ಸಾಲೇಗಾಂವ ವ್ಯಾಪ್ತಿಯಲ್ಲಿ ಭಾನುವಾರ ಕಂಡುಬಂತು.
ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಶೇ.40ರಿಂದ 50ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲೂ ತೇವಾಂಶದ ಕೊರತೆಯಿಂದ ಹಲವು ಬೆಳೆಗಳು ಹಾನಿಗೊಳಗಾಗಿವೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆಲವೆಡೆ ಅಳಿದುಳಿದ ತೇವಾಂಶದಲ್ಲಿ ಬೆಳೆಗಳು ಚೇತರಿಸಿಕೊಂಡಿದ್ದು, ರೈತರು ಔಷಧಿ ಸಿಂಪಡಣೆ, ಕಳೆ ನಿರ್ವಹಣೆ ಹಾಗೂ ಎಡೆಸಾಗು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಈ ನಡುವೆ ಸಾಲೇಗಾಂವ ಗ್ರಾಮದಲ್ಲಿ ಭಾನುವಾರ ರೈತರೊಬ್ಬರು ಬೈಕ್ ಬಳಸಿ ಬೆಳೆಯಲ್ಲಿ ಎಡೆಸಾಗು ಮಾಡುವ ಮೂಲಕ ಗಮನ ಸೆಳೆದರು.
ಬೆಳೆಯಲ್ಲಿ ಎಡೆಸಾಗು ಮಾಡಲು ಸಾಮಾನ್ಯವಾಗಿ ಎತ್ತುಗಳು ಹಾಗೂ ಇಬ್ಬರಿಂದ ಮೂವರು ಕಾರ್ಮಿಕರ ಅಗತ್ಯವಿರುತ್ತದೆ. ಆದರೆ ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕೂಲಿ ವೆಚ್ಚದಿಂದಾಗಿ ರೈತರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಮಹಾದೇವಪ್ಪ ಕಂಬಾರ ಅವರು ಮೋಟಾರ್‌ಸೈಕಲ್‌ಗೆ ಕೃಷಿ ಉಪಕರಣವೊಂದನ್ನು ಅಳವಡಿಸಿಕೊಂಡು ತಮ್ಮ ಹೊಲದಲ್ಲಿ ಎಡೆಸಾಗು ಮಾಡಿದರು.
ದಿನಕ್ಕೆ 6 ಎಕರೆ ಎಡೆಸಾಗು :
ಎತ್ತುಗಳ ಮೂಲಕ ದಿನಕ್ಕೆ ಸುಮಾರು 2 ಎಕರೆ ಪ್ರದೇಶದಲ್ಲಿ ಎಡೆಸಾಗು ಮಾಡಬಹುದಾದರೆ, ಮೋಟಾರ್‌ಸೈಕಲ್ ಬಳಸಿ ದಿನಕ್ಕೆ ಸುಮಾರು 6 ಎಕರೆ ಪ್ರದೇಶದಲ್ಲಿ ಎಡೆಸಾಗು ಮಾಡಬಹುದಾಗಿದೆ. ಇದರಿಂದ ಸಮಯ ಹಾಗೂ ವೆಚ್ಚ ಎರಡನ್ನೂ ಉಳಿತಾಯ ಮಾಡಬಹುದು ಎಂದು ರೈತ ಮಹಾದೇವಪ್ಪ ಕಂಬಾರ ತಿಳಿಸಿದರು.
ಕೃಷಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ವೆಚ್ಚ ಹಾಗೂ ಸಮಯದ ಅಭಾವದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಸ್ಥಳೀಯವಾಗಿ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಕಾರ್ಯಗಳನ್ನು ಸುಲಭಗೊಳಿಸಲು ಮುಂದಾಗುತ್ತಿದ್ದಾರೆ. ಕಳೆ ನಿಯಂತ್ರಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಯಾಂತ್ರೀಕರಣ ಅಳವಡಿಸಿಕೊಳ್ಳುವುದರಿಂದ ರೈತರ ಶ್ರಮ ಮತ್ತು ಸಮಯ ಉಳಿತಾಯವಾಗಲಿದೆ.
ಕೃಷಿ ಕ್ಷೇತ್ರದಲ್ಲಿ ಇಂತಹ ಸ್ಥಳೀಯ ತಂತ್ರಜ್ಞಾನ ಆಧಾರಿತ ಪ್ರಯೋಗಗಳಿಗೆ ಉತ್ತೇಜನ ನೀಡುವುದರ ಜತೆಗೆ, ರೈತರಿಗೆ ಕೈಗೆಟುಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಕೃಷಿ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.