ಸರಕಾರಿ ಆಸ್ಪತ್ರೆಗಳಲ್ಲೇ ಅತ್ಯುತ್ತಮ ಚಿಕಿತ್ಸೆ: ಸಚಿವ ಶರಣಪ್ರಕಾಶ್ ಪಾಟೀಲ್
"ಕಲಬುರಗಿಯಲ್ಲೇ ನಿಮ್ಹಾನ್ಸ್, ಕಿದ್ವಾಯಿ, ಜಯದೇವ ಮಾದರಿಯ ಸೇವೆ"
ಸೇಡಂ: ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ಉನ್ನತ ಮಟ್ಟದ ಆರೋಗ್ಯ ಸೇವೆಗಾಗಿ ಹೈದರಾಬಾದ್, ಸೊಲ್ಲಾಪುರ ಸೇರಿದಂತೆ ಹೊರ ಜಿಲ್ಲೆಗಳಿಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ತಪ್ಪಿಸಲು ಕಲಬುರಗಿಯಲ್ಲೇ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಳಖೇಡ ಮತ್ತು ಬೀರನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಬೀರನಹಳ್ಳಿ–ಅರೆಬೊಮ್ಮನಹಳ್ಳಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಕಲಬುರಗಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಪ್ರಾದೇಶಿಕ ಮಟ್ಟದ ಅತ್ಯಾಧುನಿಕ ಆಸ್ಪತ್ರೆಗಳು ಹಾಗೂ ಚಿಕಿತ್ಸಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತಮ್ಮ ಊರಿನ ಸಮೀಪದಲ್ಲೇ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ಕಲಬುರಗಿ ನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನರರೋಗ ಮತ್ತು ಮೆದುಳಿನ ಚಿಕಿತ್ಸೆಯ ಪ್ರಾದೇಶಿಕ ಕೇಂದ್ರ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಹೊರತಾಗಿ ಕಲಬುರಗಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 80 ಕೋಟಿ ರೂ. ವೆಚ್ಚದಲ್ಲಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ವಿಶೇಷ ಆರೈಕೆ ಕೇಂದ್ರ, 76 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ರೇಡಿಯೋಥೆರಪಿ ಸೇರಿದಂತೆ ಇತರೆ ಸೌಲಭ್ಯಗಳು ಹಾಗೂ 50 ಕೋಟಿ ರೂ. ವೆಚ್ಚದಲ್ಲಿ ಮಧುಮೇಹ ನಿರ್ವಹಣೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲೇ ಮೊದಲ ಅತ್ಯಾಧುನಿಕ ಬರ್ನ್ಸ್ ಯೂನಿಟ್ ಕೂಡ ಕಲಬುರಗಿಯಲ್ಲಿ ಸಿದ್ಧವಾಗಿದ್ದು, ಸುಟ್ಟ ಗಾಯಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವ ಈ ಘಟಕವನ್ನು ಮುಂದಿನ ಒಂದು ತಿಂಗಳೊಳಗೆ ಉದ್ಘಾಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸಮಾನವಾಗಿ ನುರಿತ ತಜ್ಞ ವೈದ್ಯರು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭ್ಯವಿವೆ. ಬಡವರು ಹಾಗೂ ಸಾಮಾನ್ಯ ಜನರಿಗೆ ಬಹುತೇಕ ಚಿಕಿತ್ಸಾ ಸೇವೆಗಳು ಉಚಿತವಾಗಿ ದೊರೆಯುತ್ತಿವೆ. ಹೀಗಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದುಬಾರಿ ವೆಚ್ಚ ಮಾಡುವ ಬದಲು ಕಲಬುರಗಿಯಲ್ಲಿ ಲಭ್ಯವಿರುವ ಸರ್ಕಾರಿ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮೂವರು ಸಚಿವರಿಂದ ಜಿಲ್ಲೆಗೆ ಅಭಿವೃದ್ಧಿಯ ವೇಗ :
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗದೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಮೂವರು ಸಚಿವರ ಪ್ರಾತಿನಿಧ್ಯ ದೊರೆತಿದ್ದು, ಈ ತ್ರಿವಳಿ ಶಕ್ತಿಯಿಂದ ಜಿಲ್ಲೆಯ ಮೂಲಸೌಕರ್ಯ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅಭಿವೃದ್ಧಿಯ ವೇಗ ಮೂಡಲಿದೆ ಎಂದು ಡಾ. ಶರಣಪ್ರಕಾಶ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿಯಲ್ಲೇ ಉನ್ನತ ಆರೋಗ್ಯ ಸೇವೆ :
ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿರುವ ನರರೋಗ, ಮಕ್ಕಳ ಚಿಕಿತ್ಸೆ, ಕ್ಯಾನ್ಸರ್, ಮಧುಮೇಹ, ತಾಯಿ–ಮಗು ಆರೈಕೆ ಹಾಗೂ ಬರ್ನ್ಸ್ ಚಿಕಿತ್ಸಾ ಕೇಂದ್ರಗಳಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆಗಳು ಸ್ಥಳೀಯವಾಗಿಯೇ ದೊರೆಯಲಿವೆ. ಸಾರ್ವಜನಿಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ದುಬಾರಿ ಖಾಸಗಿ ಚಿಕಿತ್ಸೆಯ ವೆಚ್ಚದಿಂದ ದೂರ ಉಳಿಯಬೇಕು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಹೇಶ ಪಾಟೀಲ್ ತರನಳ್ಳಿ, ಧೂಳಪ್ಪ ದೊಡ್ಮನಿ, ವಿಲಾಸಗೌತಂ ನಿಡಗುಂದಾ, ರಾಮಯ್ಯ ಪೂಜಾರಿ, ಸಂತೋಷ ಕುಲಕರ್ಣಿ, ಜಗದೇವಪ್ಪ ಕೊಂಕನಹಳ್ಳಿ, ಬಸವರಾಜ ರೇವಗೊಂಡ, ನಾಗರಾಜ ನಂದೂರ, ಚಂದ್ರಶೇಖರ ಹರನಾಳ, ಮಂಜುನಾಥ ಸಾಹು ನೀಲಹಳ್ಳಿ, ಚನ್ನಬಸಪ್ಪ ಹಾಗರಗಿ, ರಾಮಯ್ಯ ಗುತ್ತೇದಾರ, ದೇವಿಂದ್ರಪ್ಪಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ ಮಾವಿನಗಿಡ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಗಣಪತಿ ಬಡಿಗೇರ ನಿರೂಪಿಸಿ ವಂದಿಸಿದರು.