ಬೆಳೆ ವಿಮೆ ಪರಿಹಾರ ತಾರತಮ್ಯ ಖಂಡಿಸಿ ಕಾಳಗಿ ಬಂದ್‌

Update: 2026-08-11 20:10 IST

ಕಾಳಗಿ: 2025–26ನೇ ಸಾಲಿನ ಬೆಳೆ ವಿಮೆ ಪರಿಹಾರದಲ್ಲಿ ಕಾಳಗಿ ತಾಲೂಕಿನ ರೈತರಿಗೆ ಆಗಿರುವ ತಾರತಮ್ಯ ಖಂಡಿಸಿ, ವಿವಿಧ ಮಠಾಧೀಶರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಹಮ್ಮಿಕೊಂಡಿದ್ದ ಕಾಳಗಿ ಬಂದ್‌ ಮಂಗಳವಾರ ನಡೆಯಿತು.

ರೈತರ ಹೋರಾಟಕ್ಕೆ ವ್ಯಾಪಾರಸ್ಥರು ಹಾಗೂ ಸಾರಿಗೆ ಇಲಾಖೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳು ಹಾಗೂ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಬಸ್‌ ನಿಲ್ದಾಣ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಸುತ್ತಮುತ್ತ ಜನಸಂಚಾರ ವಿರಳವಾಗಿತ್ತು. ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು.

ತಾಲೂಕಿನ ವಿವಿಧ ಗ್ರಾಮಗಳಿಂದ ಸ್ವಯಂಪ್ರೇರಿತವಾಗಿ ಆಗಮಿಸಿದ ನೂರಾರು ರೈತರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಕಾಲ್ನಡಿಗೆ ಮೂಲಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಹಳೆ ಬಸ್‌ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಲಬುರಗಿ–ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪರಿಹಾರದಲ್ಲಿ ತಾರತಮ್ಯ ಆರೋಪ :

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತರು, ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಿದ್ದರೂ ಕಾಳಗಿ ತಾಲೂಕಿನಲ್ಲಿ ಮಾತ್ರ ಪ್ರೀಮಿಯಂ ಮೊತ್ತಕ್ಕಿಂತಲೂ ಕಡಿಮೆ ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.

ತಾರತಮ್ಯವನ್ನು ಸರಿಪಡಿಸಿ ಅರ್ಹ ರೈತರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ನೀಡಬೇಕು. ಕಾಳಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕ ಡಾ. ಅವಿನಾಶ ಜಾಧವ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳೆ ವಿಮೆ ಪರಿಹಾರ ಹಣ ಬಂದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂಬ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಬೆಳೆ ಹಾನಿ ಸಮೀಕ್ಷೆ ಪರಿಶೀಲಿಸಲು ಅಧಿಕಾರಿಗಳ ವಿಶೇಷ ತಂಡ ರಚಿಸಿ, ಲೋಪ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರ ಖಾತೆಗೆ ನ್ಯಾಯಯುತ ಪರಿಹಾರ ಜಮೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.

ಜಿಪಂ ಸದಸ್ಯ ರಾಜೇಶ್ ಗುತ್ತೇದಾರ ಮಾತನಾಡಿ, ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ಅನ್ಯಾಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಏಳು ಗಂಟೆಗಳ ಹೆದ್ದಾರಿ ತಡೆ :

ಕಲಬುರಗಿ–ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಸುಮಾರು ಏಳು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ನಂತರ ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಅವರಿಗೆ ರೈತರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬೆಳೆ ಹಾನಿ ಸಮೀಕ್ಷೆಯ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರಿಗಳ ತಂಡ ರಚಿಸಿದ್ದಾರೆ. ಕ್ರಾಪ್‌ ಕಟಿಂಗ್‌ನಲ್ಲಿ ಲೋಪದೋಷ ಕಂಡುಬಂದರೆ ರೈತರಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭರತನೂರ ಚಿಕ್ಕ ಗುರುನಂಜೇಶ್ವರ‌ ಮಹಾಸ್ವಾಮಿಗಳು,‌ ಮಾಜಿ ಸಂಸದ ಡಾ.ಉಮೇಶ‌ ಜಾಧವ, ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ಶರಣಬಸಪ್ಪ‌ ಮಮಶೆಟ್ಟಿ, ಶಿವರಾಜ ಪಾಟೀಲ ಗೋಣಗಿ, ಮಲ್ಲಿಕಾರ್ಜುನ ಪಾಟೀಲ ರುದನೂರ, ಮೋಹನ ಚಿನ್ನ, ಸುಂದರ ಸಾಗರ ಮಾತನಾಡಿದರು.

ಸೂಗುರ ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರರು, ರಟಕಲ್ ಪೂಜ್ಯ ನೀಲಕಂಠ ‌ಮಹಾಸ್ವಾಮಿಗಳು, ಮಂಗಲಗಿ ಡಾ. ಶಾಂತಸೋಮನಾಥ ಶಿವಾಚಾರ್ಯರು, ರಾಯಕೊಡ‌ ಪೂಜ್ಯ ಪ್ರಶಾಂತ ದೇವರು, ಕೋಡ್ಲಿ‌ ಪೂಜ್ಯ ಬಸವಲಿಂಗ ಶಿವಾಚಾರ್ಯರು, ಹೊಸ್ಸಳ್ಳಿ‌ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರರು, ಗೌರಿಗುಡ್ಡದ ಪೂಜ್ಯ ರೇವಣಸಿದ್ಧ ಶರಣರು, ರುಮ್ಮನಗುಡ ಏಕನಾಥ ಮಹಾರಾಜ, ರೈತರಾದ ರಮೇಶ ಹೆಬ್ಬಾಳ, ಸೋಮಶೇಖರ ಚಿಂಚೋಳಿ, ಜಗದೀಶ್ ಮಾಲಿಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News