Kalaburagi | 'ವಿಬಿ ಜಿರಾಮ್ ಜಿ' ಅನುಷ್ಠಾನ: ಪಿಡಿಒಗಳ ಮೇಲೆ ಒತ್ತಡ ಖಂಡಿಸಿ ಆ.15ರಿಂದ ಕಾರ್ಯ ಬಹಿಷ್ಕಾರ

Update: 2026-08-11 20:00 IST

ಕಲಬುರಗಿ: ‘ವಿಬಿ ಜಿರಾಮ್ ಜಿ’ ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಮೇಲೆ ಅತಿಯಾದ, ಅವೈಜ್ಞಾನಿಕ ಹಾಗೂ ನಿಯಮಬಾಹಿರ ಒತ್ತಡ ಹೇರುತ್ತಿರುವುದನ್ನು ಖಂಡಿಸಿ, ಆಗಸ್ಟ್ 15ರಿಂದ ಯೋಜನೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಬಹಿಷ್ಕರಿಸಲು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ನಿರ್ಧರಿಸಿದೆ.

ಈ ಕುರಿತು ಸಚಿವರ ಕಚೇರಿ, ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಪಿಡಿಒಗಳ ಸಮಸ್ಯೆಗಳನ್ನು ತರಲಾಗಿದ್ದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘಟಿತ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ನಿರ್ದೇಶಕಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಹು ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಏಕರೂಪದ ಮಾರ್ಗಸೂಚಿ ಇಲ್ಲದಿರುವುದು, ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಗತ್ಯ ವಿನಾಯಿತಿ ಆದೇಶ ನೀಡದಿರುವುದು, ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನ ರೀತಿಯ ಮಾಹಿತಿ ನೀಡುತ್ತಿರುವುದು ಹಾಗೂ ಅನುಮೋದಿತ ಕ್ರಿಯಾಯೋಜನೆ ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕಾಮಗಾರಿ ಆರಂಭಿಸುವಂತೆ ಒತ್ತಡ ಹೇರುತ್ತಿರುವುದು ಪ್ರಮುಖ ಸಮಸ್ಯೆಗಳಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಆ.15ರಿಂದ ಬಹಿಷ್ಕಾರ :

ಆ.15ರೊಳಗೆ ಪಿಡಿಒಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದಿದ್ದರೆ ರಾಜ್ಯಾದ್ಯಂತ ಯಾವುದೇ ಎನ್‌ಎಂಆರ್‌ (ನಾಮಮಾತ್ರ ವೇತನ ಪಟ್ಟಿ) ತೆಗೆದುಕೊಳ್ಳದೆ, ಯೋಜನೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸದೆ ಹಾಗೂ ಸಂಬಂಧಿತ ಎಲ್ಲ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ರಾಜೇಶ್ವರಿ ಸಾಹು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News