×
Ad

ಆಳಂದ: ಹಡಲಗಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2026-06-06 19:37 IST

ಆಳಂದ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಹಡಲಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ ಜಗದೀಶ್ಚಂದ್ರ ಬೋಸ್ ಇಕೋ ಕ್ಲಬ್ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ 2026-27ನೇ ಸಾಲಿನ ಇಕೋ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆಪಿ ಪ್ರೌಢಶಾಲೆ ಮಾಡಿಯಾಳದ ವಿಜ್ಞಾನ ಶಿಕ್ಷಕ ಸಂತೋಷ ಖಾನಾಪುರೆ ಮಾತನಾಡಿ, ಪರಿಸರವು ಮಾನವ ಜೀವನದ ಆಧಾರವಾಗಿದ್ದು, ಇಂದಿನ ಪರಿಸರ ಸಂರಕ್ಷಣೆಯೇ ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರ ಭವಿಷ್ಯವನ್ನು ನೀಡಲಿದೆ ಎಂದು ಹೇಳಿದರು.

ಮರಗಳನ್ನು ನೆಡುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಪರಿಸರ ಸಂರಕ್ಷಣೆಯ ಪ್ರಮುಖ ಕ್ರಮಗಳಾಗಿವೆ. ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಇಕೋ ಕ್ಲಬ್ ಸಂಚಾಲಕ ಚಂದ್ರಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳ ಸಮನ್ವಯದಿಂದ ಪರಿಸರ ರೂಪುಗೊಂಡಿದೆ. ಆದರೆ ಮಾನವನ ಅತಿಯಾದ ಅಭಿವೃದ್ಧಿ ಚಟುವಟಿಕೆಗಳು, ಅರಣ್ಯನಾಶ, ಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಸಮತೋಲನ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹವಾಮಾನ ಬದಲಾವಣೆ, ನೀರಿನ ಕೊರತೆ ಹಾಗೂ ಆರೋಗ್ಯ ಸಮಸ್ಯೆಗಳಂತಹ ಗಂಭೀರ ಪರಿಣಾಮಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಪರಿಸರದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಗಿಡಮರಗಳು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ನೆರವಾಗುತ್ತವೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡುವುದು ನಮ್ಮ ಭವಿಷ್ಯವನ್ನು ರಕ್ಷಿಸಿದಂತೆಯೇ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ನಾದ ಕೆಂಚಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಂಜಯಕುಮಾರ್ ಅತ್ತೆ, ಸದಸ್ಯರಾದ ಯಲ್ಲಾಲಿಂಗ ಸಂಗದಿ ಹಾಗೂ ಶಿವಾನಂದ ಜೋಗನ, ಶಿಕ್ಷಕರಾದ ಮಹೇಶ್ ಕಾಳ, ರಘುವೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News