ಕಲಬುರಗಿ | ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಎಚ್ಚರಿಕೆ
ಕಲಬುರಗಿ: ವಿಶ್ವ ಪರಿಸರ ದಿನಾಚರಣೆ–2026ರ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳಿಗಾಗಿ ವಿಶೇಷ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ “ನಾಲ್ಕು ವಿಧದ ಕಸ ವಿಂಗಡಣೆ” ಕುರಿತು ಪಾಲಿಕೆಯ ಎಲ್ಲ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಕಾರ್ಯಾಗಾರದಲ್ಲಿ ತ್ಯಾಜ್ಯವನ್ನು ಮೂಲ ಹಂತದಲ್ಲಿಯೇ ವಿಂಗಡಿಸುವುದರಿಂದ ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ನಗರ ಸ್ವಚ್ಛತೆಗೆ ಆಗುವ ಪ್ರಯೋಜನಗಳ ಕುರಿತು ವಿವರಿಸಲಾಯಿತು. ಮನೆ, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡುವ ಅಗತ್ಯವನ್ನು ಅಧಿಕಾರಿಗಳು ಒತ್ತಿಹೇಳಿದರು.
ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವಿವಿಧ ಬಡಾವಣೆಗಳಲ್ಲಿ ಕಸ ಸುರಿಯುವ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಕಸ ಎಸೆಯುವವರನ್ನು ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಹಚ್ಚಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಇತ್ತೀಚೆಗೆ ಸಿಸಿಕ್ಯಾಮೆರಾ ದಾಖಲೆಯ ಆಧಾರದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದ ಮನೆಯ ಮಾಲೀಕರೊಬ್ಬರನ್ನು ಪತ್ತೆಹಚ್ಚಿ, ಸಂಬಂಧಿತ ವಲಯದ ಆರೋಗ್ಯ ನಿರೀಕ್ಷಕ ಬಸವರಾಜ ಪಾಣೆಗಾಂವ ಅವರು ಸ್ಥಳದಲ್ಲೇ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿಗಳ ಅನುಸಾರ ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ನಿವಾಸಿಗಳು ದಿನನಿತ್ಯ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳಿಗೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ಸಂಪೂರ್ಣವಾಗಿ ತ್ಯಜಿಸಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ವರ್ಷಾ ಜಾನೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಪಮಾ ಕಮಕನೂರ್ ಹಾಗೂ ಆಯಾಝ್ ಖಾನ್, ಪಾಲಿಕೆ ಸದಸ್ಯರಾದ ಅಲಾಂದಾರ್ ಜೈದಿ ಮತ್ತು ರೇಣುಕಾ, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಉಪ ಆಯುಕ್ತ (ಅಭಿವೃದ್ಧಿ) ಮಂಜುನಾಥ್ ಚವ್ಹಾಣ ಉಪಸ್ಥಿತರಿದ್ದರು.
ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಅಭಯ ಕುಮಾರ್ ಹಾಗೂ ಪರಿಸರ ಅಭಿಯಂತರ ಬಾಬು ಮೇಲಕೇರಿ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ತ್ಯಾಜ್ಯ ನಿರ್ವಹಣೆಯ ಮಹತ್ವದ ಕುರಿತು ಚರ್ಚಿಸಿದರು.