×
Ad

ಕಲಬುರಗಿ| ವಿಬಿಜಿರಾಮ್‌ಜಿ ಯೋಜನೆ ರದ್ದುಪಡಿಸಿ, ಮನರೇಗಾ ಸಮರ್ಪಕ ಜಾರಿಗೆ ರೈತ ಸಂಘ ಒತ್ತಾಯ

Update: 2026-06-06 18:23 IST

ಕಲಬುರಗಿ: ವಿಬಿ ಜಿರಾಮ್‌ಜಿ ಯೋಜನೆಯನ್ನು ರದ್ದುಪಡಿಸಿ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ಹಾಗೂ ಗ್ರಾಮೀಣ ಕಾರ್ಮಿಕರು, ಸರ್ಕಾರವು ರೈತರು ಮತ್ತು ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮನರೇಗಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಭದ್ರತೆ ಹಾಗೂ ಜನರ ಜೀವನೋಪಾಯ ಸುಧಾರಣೆಗೆ ಮನರೇಗಾ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, “ಕೇಂದ್ರ ಸರ್ಕಾರ ಜುಲೈ 1ರಿಂದ ವಿಬಿಜಿರಾಮ್‌ಜಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರ ಬದುಕಿಗೆ ಸಂಕಷ್ಟ ಉಂಟುಮಾಡಲು ಮುಂದಾಗಿದೆ. ಈ ಯೋಜನೆಯಡಿ ಗುತ್ತಿಗೆ ಪದ್ಧತಿಗೆ ಅವಕಾಶ ಕಲ್ಪಿಸಿರುವುದು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಈ ಯೋಜನೆಯನ್ನು ತಕ್ಷಣ ಕೈಬಿಟ್ಟು, ಹಿಂದಿನಂತೆ ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು” ಎಂದು ಆಗ್ರಹಿಸಿದರು.

ಅವರು ಗ್ರಾಮೀಣ ಜನರ ಉದ್ಯೋಗ ಮತ್ತು ಜೀವನೋಪಾಯ ರಕ್ಷಣೆಗೆ ಸರ್ಕಾರ ಸ್ಪಂದಿಸಿ, ಮನರೇಗಾ ಯೋಜನೆಗೆ ಅಗತ್ಯ ಅನುದಾನ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ಮೌನೇಶ ನಾಲವಾರ, ಸಿದ್ದಮ್ಮ, ಚಂದ್ರಪ್ಪ ಪೂಜಾರಿ, ಸಾಯಿಬಣ್ಣಾ ಕೊರಬಾ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಗ್ರಾಮೀಣ ಕಾರ್ಮಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News