ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಪರಿಸರ ದಿನಾಚರಣೆ
ಕಲಬುರಗಿ: ಪ್ರತಿಯೊಂದು ಜೀವಕುಲಕ್ಕೂ ಪರಿಸರ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ಬೆಳೆಸಿ, ಊರಿಗೊಂದು ವನ ಸೃಷ್ಟಿ ಮಾಡಬೇಕು ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ರಾಕೇಶ್ ಕಾಂಬಳೆ ಅವರು ಹೇಳಿದರು.
ಶುಕ್ರವಾರ ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಕಾರಾಗೃಹದ ಹೊರ ಹಾಗೂ ಒಳ ಆವರಣದಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಕಾರಾಗೃಹದ ಬಂದಿಗಳು ಒಟ್ಟಾಗಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ರಾಕೇಶ್ ಕಾಂಬಳೆ, ವಿಶ್ವ ಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಿತು. ಅದರಂತೆ 1974 ರಲ್ಲಿ ಮೊದಲ ಬಾರಿಗೆ 100ಕ್ಕೂ ಹೆಚ್ಚು ದೇಶಗಳಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಹೊಸ ಥೀಮ್‍ನೊಂದಿಗೆ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಒಳ ಮತ್ತು ಹೊರ ಆವರಣದಲ್ಲಿ ವಿವಿಧ ತಳಿಯ 100ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಹಾಯ ಅಧೀಕ್ಷಕರುಗಳಾದ ಬಿ. ಸುರೇಶ್, ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಜೈಲರ್‌ಗಳಾದ ಶ್ಯಾಮ ಬಿದ್ರಿ, ಸಂಸ್ಥೆಯ ಶಿಕ್ಷಕರಾದ ಶ್ರೀ ನಾಗರಾಜ ಮೂಲಗೆ ಹಾಗೂ ಕಾರಾಗೃಹದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.