ಜೇವರ್ಗಿ–ಯಡ್ರಾಮಿ ಸಾಹಿತಿಗಳ ಕಡೆಗಣನೆ ಆರೋಪ: ಕಸಾಪ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ
ಜೇವರ್ಗಿ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜೇವರ್ಗಿ–ಯಡ್ರಾಮಿ ತಾಲೂಕುಗಳಿಗೆ ಅನ್ಯಾಯವಾಗುತ್ತಿದ್ದು, ಸ್ಥಳೀಯ ಸಾಹಿತಿಗಳನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಜೇವರ್ಗಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ. ಬಿರಾದಾರ ಅವರ ನಡೆ ಖಂಡಿಸಿ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಕಾಲ್ನಡಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಹಿರಿಯರ ಸಲಹೆಯ ಮೇರೆಗೆ ಪ್ರತಿಭಟನೆಯನ್ನು ಕೈಬಿಟ್ಟು ಪ್ರವಾಸಿ ಮಂದಿರದಲ್ಲಿಯೇ ಶಾಂತಿಯುತ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹೋರಾಟಗಾರರು, ಜೇವರ್ಗಿ–ಯಡ್ರಾಮಿ ತಾಲೂಕುಗಳ ಸ್ಥಳೀಯ ಸಾಹಿತಿಗಳನ್ನು ಕಡೆಗಣಿಸಿ ಬೇರೆ ಜಿಲ್ಲೆಯ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕಸಾಪ ಅಧ್ಯಕ್ಷರು ತಮ್ಮ ನಿರ್ಧಾರವೇ ಅಂತಿಮ ಎಂಬಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನಡ ನಾಡು, ನುಡಿ ಹಾಗೂ ಭಾಷೆಯ ಉಳಿವಿಗಾಗಿ ಹೋರಾಡುವವರನ್ನು ಪ್ರಶ್ನಿಸಿದರೆ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ. ಕನ್ನಡಪರ ಹೋರಾಟಗಾರರೊಂದಿಗೆ ಇಂತಹ ವರ್ತನೆ ತೋರುವುದು ಎಷ್ಟು ಸರಿ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.
ನಂತರ ಕಸಾಪ ಪದಾಧಿಕಾರಿಗಳ ನೇತೃತ್ವದಲ್ಲಿ ಅಧ್ಯಕ್ಷ ಎಸ್.ಕೆ. ಬಿರಾದಾರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿರಾದಾರ ಅವರು ಕ್ಷಮೆ ಕೋರಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಅವರ ನಡೆ ಹೇಗಿರಲಿದೆ ಎಂಬುದನ್ನು ಗಮನಿಸಿ, ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೋರಾಟಗಾರರು ತಿಳಿಸಿದರು.
ಸಭೆಯಲ್ಲಿ ಕಸಾಪ ಗೌರವ ಅಧ್ಯಕ್ಷ ಚೆನ್ನಮಲ್ಲಯ್ಯ ಹಿರೇಮಠ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣರಾವ ಸಂಗಾವಿ ಮತ್ತು ಶ್ರೀಹರಿ ಕರಕಿಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಜೇವರ್ಗಿ ಗೌರವ ಅಧ್ಯಕ್ಷ ಶಂಕರಗೌಡ ಹಾಲಗಡ್ಲಾ, ಕಾಶಿನಾಥ ಮಂದೇವಾಲ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ, ನಮ್ಮ ಕಲ್ಯಾಣ ಕರ್ನಾಟಕ ಸೇನೆ ಸಂಸ್ಥಾಪಕ ಅಧ್ಯಕ್ಷ ಶಿವಲಿಂಗ ಹಳ್ಳಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಭೀಮಾಶಂಕರ ಬಿಲ್ಲಾಡ, ಈರಣ್ಣಗೌಡ ಗುಳ್ಯಾಳ, ರಾಜಶೇಖರ ಬಂಟನೂರ, ಅಶೋಕ ಕಂಕಿ ನೆಲೋಗಿ, ಕಾಂತಪ್ಪ, ವಿಕ್ರಂ ಪಿ. ದೊಡ್ಮನಿ, ರವಿ ಪಾಟೀಲ, ಮೊಹಿದ್ದೀನ್ ಇನಾಮದಾರ, ಗುಂಡು ಡಿ. ಗುತ್ತೇದಾರ, ಸಿದ್ದಲಿಂಗ ಮಾಹೂರ, ಗಿರೀಶ್ ತುಂಬಗಿ, ಸಿದ್ದು ಗಜ, ಸಾಗರ ನೆಲೋಗಿ, ಮಹಾಂತೇಶ ಹಾದಿಮನಿ, ಮುನ ಕಳ್ಳಿ, ಮಕಾಶಿ ನಂದಿಹಳ್ಳಿ, ಜಗದೀಶ ಮಡಿವಾಳಕರ, ರಾಜು ನಾಯಕ್, ಬಿ.ಎಚ್. ಮಾಲಿ ಪಾಟೀಲ, ಪರಶುರಾಮ ಮುದ್ದವಾಳ, ಶಿವಲಿಂಗ ರಾಸುಣಗಿ, ಸಿದ್ದು ಕೇರೂರ ಹಾಗೂ ಬಸವರಾಜ ಇಂಗಳಗಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಸಭೆಗೆ ಸಹಕಾರ ನೀಡಿದ ಕನ್ನಡಪರ ಹೋರಾಟಗಾರರು ಹಾಗೂ ಜೇವರ್ಗಿ–ಯಡ್ರಾಮಿ ತಾಲೂಕುಗಳ ವಿವಿಧ ಸಂಘಟನೆಗಳ ಮುಖಂಡರಿಗೆ ಬಸವರಾಜ ಬಿ. ಬಾಗೇವಾಡಿ ಅವರು ಪತ್ರಿಕಾ ಹೇಳಿಕೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.