Kalaburagi | ರಾಜಕೀಯ ಟೀಕೆಯಲ್ಲಿ ಜಾತಿ ಸೂಚಕ ಪದಗಳ ಬಳಕೆ ಸರಿಯಲ್ಲ: ಭಗವಂತ ವಗ್ಗೆ
ಕಲಬುರಗಿ: ರಾಜಕೀಯ ಟೀಕೆಯ ನೆಪದಲ್ಲಿ ಜಾತಿ ಸೂಚಕ ಹಾಗೂ ಅವಹೇಳನಕಾರಿ ಪದಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಫಜಲಪುರ ತಾಲೂಕು ಅಧ್ಯಕ್ಷ ಭಗವಂತ ವಗ್ಗೆ ಹೇಳಿದರು.
ಪಟ್ಟಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಬಳಸಿದ ಪದಪ್ರಯೋಗಗಳು ರಾಜಕೀಯ ಚರ್ಚೆಯ ಘನತೆಗೆ ಧಕ್ಕೆ ತರುವಂತಿವೆ ಎಂದು ಆಕ್ಷೇಪಿಸಿದರು.
ಮೀಸಲಾತಿ ವೈಯಕ್ತಿಕ ಸೌಲಭ್ಯವಲ್ಲ; ಅದು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಸಂವಿಧಾನಬದ್ಧ ವ್ಯವಸ್ಥೆಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಶೋಷಿತ ಸಮುದಾಯಗಳ ಹಕ್ಕು, ಗೌರವ ಹಾಗೂ ಪ್ರಾತಿನಿಧ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ವಿಚಾರಗಳ ಆಧಾರದಲ್ಲಿ ವ್ಯಕ್ತಪಡಿಸಬೇಕು. ವ್ಯಕ್ತಿಯ ರಾಜಕೀಯ ನಿಲುವುಗಳನ್ನು ಟೀಕಿಸುವ ಬದಲು ಜಾತಿ, ಕುಟುಂಬ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ. ಸಾರ್ವಜನಿಕ ನಾಯಕರು ಸಂಯಮದ ಭಾಷೆ ಬಳಸಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಬೇಕು ಎಂದು ಒಕ್ಕೂಟದ ಮುಖಂಡರು ಅಭಿಪ್ರಾಯಪಟ್ಟರು.
ಸಂವಿಧಾನಬದ್ಧ ಹಕ್ಕುಗಳ ಕುರಿತು ಚರ್ಚಿಸುವಾಗ ಎಲ್ಲ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಹಿರಿಯ ಸಲಹೆಗಾರ ಶಾಂತ ಮಲ್ಲಪ್ಪ ವೈ. ಹೊನ್ನಂಗರ, ಉಪಾಧ್ಯಕ್ಷ ಸುರೇಶ ಸಿ. ಸಿಂಗೆ, ಪ್ರಧಾನ ಕಾರ್ಯದರ್ಶಿ ಬೈಲಪ್ಪ ಎನ್. ಪಟೇದಾರ, ಜಂಟಿ ಕಾರ್ಯದರ್ಶಿ ಚಂದ್ರಕಾಂತ ಎಸ್. ಬನ್ನೊಡೆ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಪಿ. ತಳಕೇರಿ, ಸಹ ಕಾರ್ಯದರ್ಶಿ ಶಾಮರಾವ್ ಸಿ. ದೊಡ್ಡಮನಿ, ಖಜಾಂಚಿ ಕುಲಂಕಾರ ಕೆ. ಹಾಗೂ ಸಿಂಗೆ, ಬೈಲಪ್ಪ ಪಟೇದಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಣ್ಣಾರಾಯ ಜಿ. ಸಿಂಗೆ ಮತ್ತು ದರ್ಶನ್ ಎಸ್. ನಿಂಬರ್ಗಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.