ಕಲಬುರಗಿ : ಮಂಗಳೂರು, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ನಗರಗಳಿಗೆ ಸರಿಸಾಟಿಯಾಗುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಕಲಬುರಗಿಯಲ್ಲೇ ಲಭ್ಯವಾಗುತ್ತಿರುವುದು ಈ ಭಾಗದ ಜನರಿಗೆ ವರದಾನವಾಗಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಜಾಫರಾಬಾದ್ ಕ್ರಾಸ್ ಬಳಿ ನೂತನವಾಗಿ ಆರಂಭಗೊಂಡಿರುವ 200 ಹಾಸಿಗೆಗಳ ಎನ್.ಕೆ. ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಖ್ಯಾತ ವೈದ್ಯ ಡಾ. ಆರೀಫ್ ರಝಾ ಅಹ್ಮದ್ ಅವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಬೃಹತ್ ಆಸ್ಪತ್ರೆ ನಿರ್ಮಾಣಗೊಂಡಿರುವುದು ಶ್ಲಾಘನೀಯ ಎಂದರು.

ಅನಾರೋಗ್ಯದಿಂದ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ನೆಮ್ಮದಿಯ ವಾತಾವರಣದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಎನ್.ಕೆ. ಆಸ್ಪತ್ರೆಯು ಜನರಲ್ಲಿ ಹೊಸ ಭರವಸೆ ಮೂಡಿಸಿದ್ದು, ಕಲ್ಯಾಣ ಕರ್ನಾಟಕದ ಆರೋಗ್ಯ ಸೇವಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಡಾ. ಆರೀಫ್ ರಝಾ ಅಹ್ಮದ್ ಅವರ ನೇತೃತ್ವದ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.

ಆಸ್ಪತ್ರೆಯ ಅಧ್ಯಕ್ಷ ಡಾ. ಆರೀಫ್ ರಝಾ ಅಹ್ಮದ್ ಮಾತನಾಡಿ, ಕಲಬುರಗಿಯಲ್ಲಿ ಆರಂಭಗೊಂಡಿರುವ ಎನ್.ಕೆ. ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಕಲ್ಯಾಣ ಕರ್ನಾಟಕದ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಈ ಭಾಗದ ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ ನೀಡುವ ನಿರೀಕ್ಷೆಯಿದೆ ಎಂದರು.

ಕಾರ್ಯಕ್ರಮದಲ್ಲಿ ಎಐಜಿ ಆಸ್ಪತ್ರೆಯ ಅಧ್ಯಕ್ಷ ಡಾ.ಡಿ.ನಾಗೇಶ್ವರ ರೆಡ್ಡಿ, ಪೂಜ್ಯ ಚಿರಂಜೀವಿ ದೊಡ್ಡವ್ವ ಅಪ್ಪಾ, ದೇಶಿಕೇಂದ್ರ ಮಹಾಸ್ವಾಮಿ, ಮುರಘರಾಜೇಂದ್ರ ಸ್ವಾಮೀಜಿ, ರೇವಣಸಿದ್ದ ಸ್ವಾಮೀಜಿ, ಸಜ್ಜಾದೆ ನಶೀನ ಡಾ.ಸೀರಾಜ್ ಬಾಬಾ ಜುನೈದಿ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ತಿಪ್ಪಣ್ಣಪ್ಪ ಕಮಕನೂರ ಹಾಗೂ ಅಲ್ಲಮಪ್ರಭು ಪಾಟೀಲ್, ಕೂಡ್ ಅಧ್ಯಕ್ಷ ಮಜರ್ ಆಲಂ ಖಾನ್, ಶ್ವೇತಾ ಅಜಯಸಿಂಗ್, ಮೇಯರ್ ಅಜ್ಮಲ್ ಗೋಲಾ, ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ ದೇಶಮುಖ, ಡಾ.ಜಿ.ವಿ.ರಾವ್, ಡಾ.ಮೊಹಮ್ಮದ್ ರೇಲಾ, ವಾಹಜ್ ಬಾಬಾ, ಡಾ. ಆರೀಫ್ ರಝಾ ಅವರ ಸಹೋದರ ಅಮೀನ್ ಮುಕ್ತಾರ್, ಸೈಯಿದ್ ಅಹ್ಮದ್ ಹಾಗೂ ಆಸ್ಪತ್ರೆಯ ಮುಬೀನ್ ಅಹ್ಮದ್ ಸೇರಿದಂತೆ ಹಲವು ಗಣ್ಯರು, ವೈದ್ಯರು, ಧಾರ್ಮಿಕ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor