ಬಿ.ನಾಗೇಂದ್ರರನ್ನು ರಾಜಕೀಯ ಕಾರಣಕ್ಕಾಗಿ ಗುರಿಯಾಗಿಸಲಾಗುತ್ತಿದೆ: ಸಚಿವ ಯತೀಂದ್ರ ಸಿದ್ದರಾಮಯ್ಯ
ಕಲಬುರಗಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರ ರಾಜಕೀಯ ಪ್ರೇರಿತವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಮಾತನಾಡಿದ ಅವರು, ಇ.ಡಿ. ಮತ್ತು ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ವಾಲ್ಮೀಕಿ ಹಗರಣದ ಕುರಿತು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸಿದ್ದು, ಆ ತನಿಖೆಯಲ್ಲಿ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ಹೀಗಾಗಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ಕಾರಣಗಳಿಂದ ಕೂಡಿವೆ ಎಂದು ಹೇಳಿದರು.
ವಾಲ್ಮೀಕಿ ಹಗರಣದ ತನಿಖೆ ಈಗಾಗಲೇ ನಡೆದಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ನಾಗೇಂದ್ರ ಅವರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಉತ್ತರ ನೀಡಲಿದೆ. ಪಕ್ಷ ಸಚಿವರ ಪರವಾಗಿ ನಿಲ್ಲಲಿದೆ ಎಂದರು.
ಯತ್ನಾಳ್ ಆರೋಪಕ್ಕೆ ಸಾಕ್ಷ್ಯ ನೀಡಲಿ :
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಂತ್ರಿಮಂಡಲ ರಚನೆಗೆ 2 ಸಾವಿರ ಕೋಟಿ ರೂ. ಕಲೆಕ್ಷನ್ ಆಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಮೊದಲು ಯತ್ನಾಳ್ ಅವರು ತಮ್ಮ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ನೀಡಲಿ ಎಂದು ಒತ್ತಾಯಿಸಿದರು.
ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ಮುಖ್ಯಮಂತ್ರಿ ಆಗಲು 2,500 ಕೋಟಿ ರೂ. ಹಣ ಕೇಳುತ್ತಾರೆ ಎಂದು ಯತ್ನಾಳ್ ಆರೋಪಿಸಿದ್ದರು. ಹಾಗಾದರೆ ಆ ಆರೋಪವೂ ನಿಜವೇ ಎಂದು ಪ್ರಶ್ನಿಸಿದ ಅವರು, ಯಾವುದೇ ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದರು.
ವಂದೇ ಮಾತರಂ ವಿವಾದಕ್ಕೆ ತಿರುಗೇಟು :
ವಂದೇ ಮಾತರಂ ಗೀತೆಯ ಆರು ಪ್ಯಾರಾಗಳನ್ನು ಹಾಡಿಸುವ ವಿಚಾರವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮುನ್ನೆಲೆಗೆ ತರುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಆರು ಸ್ತಬಕಗಳನ್ನು ಹಾಡಿಸುವುದರಿಂದ ಏನು ಸಾಧಿಸಿದಂತಾಗುತ್ತದೆ? ಸ್ವಾತಂತ್ರ್ಯ ಹೋರಾಟಗಾರರು ತೆಗೆದುಕೊಂಡ ನಿರ್ಧಾರಕ್ಕಿಂತ ಬಿಜೆಪಿಯವರ ನಿರ್ಧಾರವೇ ದೊಡ್ಡದಾ? ಎಂದು ಅವರು ಪ್ರಶ್ನಿಸಿದರು.