Kalaburagi | ಚಿತ್ರಕಲಾ ಕ್ಷೇತ್ರ ಆಯ್ಕೆ ಮಾಡಿಕೊಂಡು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ: ಬಸವರಾಜ ಜಾನೆ
ಕಲಬುರಗಿ: ಚಿತ್ರಕಲೆಯು ಅದ್ಭುತ ಕ್ಷೇತ್ರವಾಗಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕತೆ ಹಾಗೂ ಗೌರವದಿಂದ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬಹುದು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಹೇಳಿದರು.
ನಗರದ ಬಿಸಿಲು ಆರ್ಟ್ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಆಯೋಜಿಸಿದ್ದ ಯುವ ಚಿತ್ರಕಲಾವಿದೆ ಲಕ್ಷ್ಮೀ ಆರ್. ಪೊದ್ದಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಚಿತ್ರಕಲಾವಿದೆ ಲಕ್ಷ್ಮೀ ಆರ್. ಪೊದ್ದಾರ ಅವರು ಚಿತ್ರಕಲಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಹಲವು ಕಲಾಕೃತಿಗಳನ್ನು ರಚಿಸಿ ಕಲಾವಿದೆಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಾವಿದರು ರೂಪಭೇದ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ ಹಾಗೂ ವರ್ಣಿಕಾಭಂಗ ಎಂಬ ಆರು ಅಂಗಗಳನ್ನು ಅರಿತು ಕಲಾಕೃತಿಗಳನ್ನು ರಚಿಸಬೇಕು. ಅಚಲ ನಂಬಿಕೆ, ಕಲಾಸಕ್ತಿ ಹಾಗೂ ಸ್ಪಷ್ಟ ಗುರಿಯೊಂದಿಗೆ ಕಲಾಕ್ಷೇತ್ರ ಪ್ರವೇಶಿಸಿ ಭವಿಷ್ಯ ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.
ಲಕ್ಷ್ಮೀ ಅವರ ಕಲಾಕೃತಿಗಳಲ್ಲಿ ಚಿತ್ರಾತ್ಮಕ ಸಂಯೋಜನೆ ಕಂಡುಬರುತ್ತದೆ. ಕಲಾಕೃತಿ ರಚನೆಯಲ್ಲಿ ಕಲಾವಿದರ ಜೀವನಾನುಭವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಿಕಾ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಬಿ. ಜಾನೆ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳಾ ಕಲಾವಿದರಿಗೆ ಸಾಕಷ್ಟು ಅವಕಾಶ ಹಾಗೂ ಪ್ರೋತ್ಸಾಹ ದೊರೆಯುತ್ತಿದೆ. ಮಹಿಳೆಯರು ತಮ್ಮ ಸ್ವಸಾಮರ್ಥ್ಯ ಮತ್ತು ಸಮರ್ಪಣಾ ಮನೋಭಾವದಿಂದ ಶ್ರೇಷ್ಠ ಕಲಾಕೃತಿಗಳನ್ನು ರಚಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಮಾತನಾಡಿ, ಲಕ್ಷ್ಮೀ ಅವರ ಕಲಾಕೃತಿಗಳಲ್ಲಿ ಹೊಸತನ ಹಾಗೂ ಬದಲಾವಣೆ ಕಾಣಬಹುದು. ನಿಸರ್ಗದಿಂದ ಪ್ರೇರಣೆ ಪಡೆದು ರಚಿಸಿರುವ ಚಿತ್ರಗಳಲ್ಲಿ ಸೌಂದರ್ಯವಿದೆ ಎಂದರು.
ಅವರ ಕಲಾಕೃತಿಗಳಲ್ಲಿ ಪ್ರಕೃತಿ ಪ್ರೇಮದ ಜೊತೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ಸಂದೇಶವಿದೆ. ಬರಗಾಲ, ಅತಿವೃಷ್ಟಿ ಹಾಗೂ ಪರಿಸರ ನಾಶ ಸೇರಿದಂತೆ ಹಲವು ಸಮಸ್ಯೆಗಳನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ ಎಂದು ಹೇಳಿದರು.
ವ್ಹಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷೆ ಶೈಲಜಾ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಚಿತ್ರಕಲೆ ಹಾಗೂ ಕಲಾವಿದರ ಕೊಡುಗೆ ಅಪಾರವಾಗಿದೆ. ಕುಟುಂಬ ನಿರ್ವಹಣೆಯ ಜತೆಗೆ ಮಹಿಳೆಯರು ಕಲಾಕ್ಷೇತ್ರ ಪ್ರವೇಶಿಸಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಲೆಯಿಂದ ಮಾನಸಿಕ ನೆಮ್ಮದಿ, ಆರೋಗ್ಯ ಹಾಗೂ ಸೌಂದರ್ಯ ಪ್ರಜ್ಞೆ ಬೆಳೆಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಾರಾಯ ಚಿನಮಳ್ಳಿ, ಚಂದ್ರಹಾಸ ಜಾಲಿಹಾಳ, ಡಾ. ಪರಶುರಾಮ ಪಿ, ಡಾ. ಕೆ. ಎಂ. ಕುಮಾರಸ್ವಾಮಿ, ಕುಪೇಂದ್ರ, ಜಲಜಾಕ್ಷಿ, ಕುಲಕರ್ಣಿ, ರಾಜು ತಳವಾರ, ಗೋಪಾಲ್ ಕೆ.ಪಿ, ಮಲ್ಲಿಕಾರ್ಜುನ ಮುಗಳಿ, ಹಣಮಂತ ತಳವಾರ ಸೇರಿದಂತೆ ಮುಂತಾದವ ರಿದ್ದರು. ಶಿವಪ್ಪ ಎನ್. ಪೂಜಾರಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.