Kalaburagi | ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಯೂರಿಯಾ ಸಂಗ್ರಹ: 1,250 ಚೀಲ ವಶ

Update: 2026-08-23 20:01 IST

ಕಲಬುರಗಿ: ನಗರದ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ದಾಲ್ ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿ, ಮೂಲ ಚೀಲಗಳಿಂದ ತೆಗೆದು ಬಿಳಿ ಚೀಲಗಳಿಗೆ ತುಂಬಿ ಮಿಶ್ರಣ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 1,250 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ದಾಲ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗೊಬ್ಬರವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಯೂರಿಯಾದ ಅಂದಾಜು ಮೌಲ್ಯ 3.72 ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ದಾಲ್ ಮಿಲ್‌ನಲ್ಲಿ ಪರವಾನಗಿ ಇಲ್ಲದೆ ರಸಗೊಬ್ಬರ ಸಂಗ್ರಹಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ್ ರಂಗರಾವ್, ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಹಾಗೂ ಕೃಷಿ ಅಧಿಕಾರಿ ಜಹಾಂಗೀರ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿತು.

ಘಟನೆಗೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸಗೊಬ್ಬರ ಸಂಗ್ರಹಿಸಲು ದಾಲ್ ಮಿಲ್‌ನಲ್ಲಿ ಸ್ಥಳ ಬಾಡಿಗೆಗೆ ನೀಡಿರುವುದೂ ನಿಯಮಬಾಹಿರವಾಗಿದ್ದು, ಇದಕ್ಕೆ ಅವಕಾಶ ನೀಡಿದ ಮಿಲ್ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ್ ರಂಗರಾವ್ ತಿಳಿಸಿದ್ದಾರೆ.

ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News