ವಾಡಿ | ಅ.24ರಂದು ನಾಲವಾರದಲ್ಲಿ ಶೇಂಗಾ ಬೆಳೆ ಉತ್ಪಾದನೆ ಹೆಚ್ಚಿಸಲು ರೈತರಿಗೆ ವಿಶೇಷ ತರಬೇತಿ
ಸಾಂದರ್ಭಿಕ ಚಿತ್ರ
ವಾಡಿ: ನಾಲವಾರ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಶೇಂಗಾ ಬೆಳೆಯ ಉತ್ಪಾದನೆ ಹೆಚ್ಚಿಸುವ ಕುರಿತು ರೈತರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಅ.24ರಂದು ಆಯೋಜಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದಾರ ತಿಳಿಸಿದ್ದಾರೆ.
ಅ.24ರಂದು ಬೆಳಿಗ್ಗೆ 10.30ಕ್ಕೆ ನಾಲವಾರ ರೈತ ಸಂಪರ್ಕ ಕೇಂದ್ರದಲ್ಲಿ ತರಬೇತಿ ಆರಂಭವಾಗಲಿದೆ. ನಾಲವಾರ ಹೋಬಳಿಯಲ್ಲಿ ಶೇಂಗಾ ಪ್ರಮುಖ ಹಿಂಗಾರು ಬೆಳೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 5,350 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಅನುಭವಿ ಕೃಷಿ ವಿಜ್ಞಾನಿಗಳಿಂದ ರೈತರಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತರಬೇತಿಯಲ್ಲಿ ಭೂಮಿ ಸಿದ್ಧತೆ, ಸೂಕ್ತ ತಳಿ ಹಾಗೂ ಗುಣಮಟ್ಟದ ಬೀಜಗಳ ಆಯ್ಕೆ, ಬೀಜ ಮೊಳಕೆ ಪರೀಕ್ಷೆ, ಬೀಜೋಪಚಾರ, ಬಿತ್ತನೆ ಸಮಯ ಮತ್ತು ವಿಧಾನ, ಬೀಜ ಹಾಗೂ ಸಾಲಿನ ಅಂತರ, ಕಳೆ ನಿರ್ವಹಣೆ, ಕೀಟ ಹಾಗೂ ರೋಗ ನಿಯಂತ್ರಣ ಸೇರಿದಂತೆ ಶೇಂಗಾ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.
ಅಲ್ಲದೆ, ಕೃಷಿ ಇಲಾಖೆಯಿಂದ ಶೇಂಗಾ ಬೆಳೆಗೆ ಅಗತ್ಯವಿರುವ ಪರಿಕರಗಳ ಲಭ್ಯತೆ, ಅವುಗಳನ್ನು ಪಡೆಯುವ ವಿಧಾನ ಹಾಗೂ ವಿವಿಧ ಇಲಾಖಾ ಸೌಲಭ್ಯಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುವುದು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಶೇಂಗಾ ಬೆಳೆಯ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಿಕೊಳ್ಳಲು ತರಬೇತಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ನಾಲವಾರ ಹೋಬಳಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಯಲ್ಲಿ ಭಾಗವಹಿಸಿ ಕೃಷಿ ವಿಜ್ಞಾನಿಗಳಿಂದ ಅಗತ್ಯ ಮಾಹಿತಿ ಪಡೆದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದಾರ ಮನವಿ ಮಾಡಿದ್ದಾರೆ.