10 ಜನ್ಮವಾದರೂ ಜೇವರ್ಗಿ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ: ಸಚಿವ ಡಾ.ಅಜಯ್ ಸಿಂಗ್
ಜೇವರ್ಗಿ: ಜೇವರ್ಗಿ ಕ್ಷೇತ್ರದ ಜನರು ತಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಕ್ಕೆ 10 ಜನ್ಮ ಎತ್ತಿದರೂ ಋಣ ತೀರಿಸಲು ಸಾಧ್ಯವಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಸಿಂಗ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
54 ವರ್ಷಗಳಿಂದ ಜೇವರ್ಗಿ ಕ್ಷೇತ್ರದ ಜನರು ತಮ್ಮ ಕುಟುಂಬಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ತಮ್ಮ ತಂದೆ ದಿವಂಗತ ಧರಂಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಅವರ ಪುತ್ರನಾಗಿ ಸಚಿವನಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ಇದಕ್ಕೆ ಕ್ಷೇತ್ರದ ಜನರ ಪ್ರೀತಿ, ನಂಬಿಕೆ ಹಾಗೂ ಆಶೀರ್ವಾದವೇ ಕಾರಣ ಎಂದರು.
ಶಾಸಕರಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದೀಗ ಸಣ್ಣ ನೀರಾವರಿ ಸಚಿವನಾಗಿ ರೈತರ ಅಭಿವೃದ್ಧಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ರಾಜ್ಯದ ಪ್ರಗತಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮನೆಯ ಮಗನಾಗಿ ಜನರೊಂದಿಗೆ ನಿಂತು, ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದ ಜನರು ತಮ್ಮ ಮೇಲೆ ಅಸಮಾಧಾನಗೊಂಡಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಕೋಪ, ಅಸಮಾಧಾನವನ್ನು ಮರೆತು, ‘ಅವರೂ ನಮ್ಮವರೇ’ ಎಂಬ ಭಾವನೆಯಿಂದ ಮತ್ತೆ ಆಶೀರ್ವದಿಸಿ ಗೆಲ್ಲಿಸಿದ್ದಾರೆ. ಜನರ ಈ ಪ್ರೀತಿ ಮತ್ತು ವಿಶ್ವಾಸಕ್ಕೆ ತಮ್ಮ ಕುಟುಂಬ ಸದಾ ಋಣಿಯಾಗಿರುತ್ತದೆ ಎಂದು ಹೇಳಿದರು.
ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ :
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಜೇವರ್ಗಿ ಕ್ಷೇತ್ರದ ಜನರ ಒಳಿತಿಗಾಗಿ ಸದಾ ಕಾಳಜಿ ವಹಿಸುವ ನಾಯಕ ಡಾ. ಅಜಯ್ ಸಿಂಗ್. ಜನರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಇದುವರೆಗೆ ಸುಮಾರು ಒಂದು ಲಕ್ಷ ಜನರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ ಎಂದರು.
ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದೀಗ ಸಣ್ಣ ನೀರಾವರಿ ಸಚಿವರಾಗಿರುವ ಅವರು ಜೇವರ್ಗಿ ಹಾಗೂ ಯಡ್ರಾಮಿ ಭಾಗದ ರೈತರ ಅನುಕೂಲಕ್ಕಾಗಿ ಅಗತ್ಯ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಸಚಿವರಾಗಿ ಜೇವರ್ಗಿ ಕ್ಷೇತ್ರಕ್ಕೆ ಮೊದಲ ಬಾರಿಗೆ ಆಗಮಿಸಿದ ಡಾ. ಅಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಿ, ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಈಜೇರಿ, ಜೇಸ್ಕಾಂ ಅಧ್ಯಕ್ಷ ಪ್ರವೀಣ್ ಕುಮಾರ್ ಹರವಾಳ, ನೀಲಕಂಠರಾವ್ ಮೂಲಗೆ, ರಾಜಶೇಖರ್ ಸೀರಿ, ಕಾಶಿರಾಯಗೌಡ ಯಲಗೋಡ, ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಕಾಸಿಂ ಪಟೇಲ್ ಮುದವಾಳ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶೌಕತ್ ಅಲಿ ಆಳೂರು, ಚಂದ್ರಶೇಖರ ಪುರಾಣಿಕ, ಹಯ್ಯಾಳಪ್ಪ ಗಂಗಾಕರ್, ಅಬ್ದುಲ್ ರಹೆಮಾನ್ ಪಟೇಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ, ತಿಪ್ಪಣ್ಣ ಬಳಬಟ್ಟಿ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಶರಣಗೌಡ ಸರಡಗಿ, ರಜಾಕ್ ಮನಿಯಾರ್ ಯಡ್ರಾಮಿ, ಮಾಫಿದಶೇಟ್ ಗಿರಣಿ, ಇಮ್ರಾನ್ ಕುಕನೂರು, ರಿಯಾದ್ ಪಟೇಲ್ ಮುದವಾಳ, ಮರೆಪ್ಪ ಸರಡಗಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.