ಕಲ್ಯಾಣ ಕರ್ನಾಟಕ ಹಾಗೂ ಮಿಕ್ಕುಳಿದ ವೃಂದಕ್ಕೆ ಸಂಬಂಧಿಸಿದಂತೆ ಒಂದೇ ಜೇಷ್ಠತಾ ಪಟ್ಟಿ ತಯಾರಿಸಲು ಸಚಿವ ಸಂಪುಟ ಉಪಸಮಿತಿ ಸೂಚನೆ
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಬದ್ಧತೆಯನ್ನು ತೋರಿಸುತ್ತಿಲ್ಲ ಎಂದು ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ತಮ್ಮ ವಿಳಂಬ ಧೋರಣೆಯನ್ನು ಬದಿಗಿರಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ.
ಭಾರತದ ಸಂವಿಧಾನದ ಅನುಚ್ಛೇದ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ರಚಿಸಲಾಗಿರುವ ಸಂಪುಟ ಉಪಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ ಸಂಪುಟ ಉಪ ಸಮಿತಿಯ ಇತರ ಸದಸ್ಯರೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಬಂಧ ಚರ್ಚೆ ನಡೆಸಿ ಅವುಗಳನ್ನು ಶೀಘ್ರದಲ್ಲಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪುಟ ಉಪಸಮಿತಿಯ ಸದಸ್ಯರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಬೋಸರಾಜು, ಪೌರಾಡಳಿತ ಸಚಿವ ರಹೀಂಖಾನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮುಂಬಡ್ತಿ ನೀಡುವಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸದೇ ಒಂದೇ ಜೇಷ್ಠತಾ ಪಟ್ಟಯನ್ನು ಪ್ರಕಟಿಸಲು ಸಚಿವ ಸಂಪುಟ ಉಪ ಸಮಿತಿಯು ಸಿಬ್ಬಂದಿ ಹಾಗೂ ಆಡಳಿತ ಸುಧಾರಣ ಇಲಾಖೆಗೆ ಈಗಾಗಲೆ ಸೂಚಿಸಿದ್ದು, ಅದರಂತೆ ಒಂದೇ ಜೇಷ್ಠತಾ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕೆಂದು ಸಂಪುಟ ಉಪಸಮಿತಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿತು.
ಸಚಿವಾಲಯದ ಅಧಿಕಾರಿ ಹಾಗೂ ನೌಕರರ ಜೇಷ್ಠತೆಯನ್ನು 2014ರ ಏಪ್ರಿಲ್ 21ರಿಂದ ಜಾರಿಗೆ ಬರುವಂತೆ ಕಾಲ್ಪನಿಕ ಜೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸಲು ನೀಡಲಾಗಿದ್ದ ಸೂಚನೆಗೆ ಅನುಗುಣವಾಗಿ ಸಹಾಯಕ, ಹಿರಿಯ ಸಹಾಯಕ, ಶಾಖಾಧಿಕಾರಿ, ಶೀಘ್ರಲಿಪಿಗಾರರು ಹಾಗೂ ಪತ್ರಾಂಕಿತ ಆಪ್ತ ಸಹಾಯಕ ವೃಂದದ ಅಧಿಕಾರಿ/ನೌಕರರ ಜೇಷ್ಠತೆಯನ್ನು ಮರು ನಿಗದಿಪಡಿಸಲಾಗಿದೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧಿಕಾರಿಗಳು ಸಂಪುಟ ಉಪ ಸಮಿತಿಯ ಮುಂದೆ ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ನ್ಯಾಯಾಲಯದ ಮುಂದಿದ್ದು, ಅಂತಹ ಪ್ರಕರಣಗಳ ಸ್ವರೂಪ, ಪ್ರಸ್ತುತ ಸ್ಥಿತಿಗತಿ ಕುರಿತ ಮಾಹಿತಿ ನೀಡುವುದರ ಜೊತೆಗೆ ಅವುಗಳ ಇತ್ಯರ್ಥಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಪೂರ್ಣ ವಿವರಗಳನ್ನು ಒಂದು ವಾರದ ಒಳಗಾಗಿ ಸಂಪುಟ ಉಪ ಸಮಿತಿಗೆ ಸಲ್ಲಿಸಲು ಸಚಿವ ಪ್ರಿಯಾಂಕ ಖರ್ಗೆ ಸೂಚಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದ ಸಚಿವರು ಅನುಪಾಲನ ವರದಿ ಸಲ್ಲಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.