Chitapur | ಬೀದಿ ವ್ಯಾಪಾರಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿ ಆರೋಪ : ಕ್ರಮಕ್ಕೆ ಆಟೋ ಚಾಲಕರ ಸಂಘ ಒತ್ತಾಯ
ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಸ್ತೆ ಮಧ್ಯೆಯೇ ಬೀದಿ ವ್ಯಾಪಾರ ನಡೆಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ತಾಂಡೂರಕರ್ ಒತ್ತಾಯಿಸಿದರು.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಜನತಾ ಚೌಕದಿಂದ ನಾಗಾವಿ ಚೌಕ, ಭುವನೇಶ್ವರಿ ಚೌಕ, ಮುಸ್ಲಿಂ ಚೌಕ ಹಾಗೂ ಭುವನೇಶ್ವರಿ ಚೌಕದಿಂದ ಲಾಡ್ಜಿಂಗ್ ಕ್ರಾಸ್‌ವರೆಗೆ ರಸ್ತೆ ಮಧ್ಯೆ ನಿಂತು ಬೀದಿ ವ್ಯಾಪಾರ ನಡೆಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ ಎಂದು ದೂರಿದರು.
ಜನತಾ ಚೌಕದಿಂದ ಭುವನೇಶ್ವರಿ ಚೌಕವರೆಗೆ ಎರಡೂ ಬದಿಗಳಲ್ಲಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ಅಂಗಡಿದಾರರು ಕಬಳಿಸಿಕೊಂಡು ತಮ್ಮ ಸಾಮಾನುಗಳನ್ನು ರಸ್ತೆಯ ಮೇಲೆ ಇಟ್ಟಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಣ್ಣ ರಸ್ತೆಗಳ ಮಧ್ಯೆಯೇ ವ್ಯಾಪಾರ ನಡೆಯುತ್ತಿರುವುದರಿಂದ ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಇಷ್ಟಾದರೂ ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಸಾರ್ವಜನಿಕರ ಓಡಾಟಕ್ಕಾಗಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸಬೇಕು. ಬೀದಿ ವ್ಯಾಪಾರಿಗಳು ರಸ್ತೆ ಮಧ್ಯೆ ನಿಲ್ಲದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಬೇಕು. ಅಲ್ಲದೆ, ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಟೋ ಚಾಲಕರಾದ ನಾಗರಾಜ, ಬುಗ್ಗಪ್ಪ, ಮುನ್ನಪ್ಪ, ಪ್ರೇಮರಾಜ, ಸೂರ್ಯಕಾಂತ ಠಾಕೂರ್, ಫೀರೋಜ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.