Kalaburagi | ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಕಾಯಕ ಶರಣರ ಸಮಾಜಗಳ ಒಕ್ಕೂಟ ವಿರೋಧ
ಕಲಬುರಗಿ: ನಗರದ ಎನ್.ವಿ. ಮೈದಾನದಲ್ಲಿ ಸೆಪ್ಟೆಂಬರ್ 27ರಂದು ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಕರ್ನಾಟಕ ರಾಜ್ಯ ಕಾಯಕ ಶರಣರ ಸಮಾಜಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಢೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಬುಧವಾರ ಸಭೆ ನಡೆಸಿದ ಒಕ್ಕೂಟದ ಪ್ರಮುಖರು, ಬಸವತತ್ವ ಮತ್ತು ಶರಣರ ಪರಂಪರೆಯ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಮುಖಂಡರು, ಕನ್ನೇರಿ ಮಠದ ಕಾಡಸಿದ್ಧೇಶ್ವರರ ಶರಣ ಪರಂಪರೆಯ ಹಿನ್ನೆಲೆಯನ್ನು ಉಲ್ಲೇಖಿಸಿ, ಬಸವತತ್ವದ ವಿಚಾರಧಾರೆಯನ್ನು ವೈದಿಕ ಆಚರಣೆಗಳೊಂದಿಗೆ ಸಂಯೋಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಗೊಂದಲ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಬಸವತತ್ವ ಹಾಗೂ ಶರಣರ ಪರಂಪರೆಯ ಆಶಯಗಳನ್ನು ಕಾಪಾಡುವ ಉದ್ದೇಶದಿಂದ ಸೆಪ್ಟೆಂಬರ್ 25ರಂದು ಬಸವತತ್ವ ಹಾಗೂ ಸಂವಿಧಾನ ರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಯಲ್ಲಿ ವಿವಿಧ ಕಾಯಕ ಸಮಾಜದ ಜನರು ಭಾಗವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ, ಡೋಹರ ಕಕ್ಕಯ್ಯ ಸಮಾಜದ ಸಾಯಿಬಣ್ಣ ಹೋಳ್ಕರ್ ಹೆಳವರ ಸಮಾಜದ ಮಲ್ಲಿಕಾರ್ಜುನ ಹೆಳವರ್, ಹರಳಯ್ಯ ಸಮಾಜದ ಕಾಶಿರಾಯ ನಂದೂರ್, ಶಿವಲಿಂಗಪ್ಪ ಗೌಳಿ, ಹಡಪದ ಅಪ್ಪಣ್ಣ ಸಮಾಜದ ವೀರಣ್ಣ ಸಣ್ಣೂರು, ಮಡಿವಾಳ ಸಮಾಜದ ಧರ್ಮಣ್ಣ ಮಡಿವಾಳ, ಜೇಡರ ದಾಸಿಮಯ್ಯ ಸಮಾಜದ ರೇವಣಸಿದ್ದಪ್ಪ ಗಡ್ಡದ, ಅಂಬಿಗರ ಚೌಡಯ್ಯ ಸಮಾಜದ ಶ್ರೀಮಾನ್ ತಿಪ್ಪಣ್ಣಪ್ಪ ಕಮಕನೂರ್ ಮೇದಾರ ಕೇತಯ್ಯ ಸಮಾಜದ ಭೀಮಣ್ಣ ಬೋನಾಳ ಕುರುಬ ಗೊಲ್ಲಾಳೇಶ್ವರ ಸಮಾಜದ ಹಿರಗಪ್ಪ ಪೂಜಾರಿ ನೂಲಿಯ ಚಂದಯ್ಯ ಸಮಾಜದ ಬಿ.ಹೆಚ್. ಭಜಂತ್ರಿ ಮತ್ತು ರಮೇಶ್ ಹೊಸಮನಿ ಸಿದ್ದರಾಮೇಶ್ವರ ಸಮಾಜದ ಭಾಷಾ ಘೋರಕ ನಾಥ್, ಚೌಗುಲೆ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.