Kalaburagi | ಆಯುರ್ವೇದ ದಿನಾಚರಣೆ ಅಂಗವಾಗಿ ಉಚಿತ ಆಯುರ್ವೇದ, ಪಂಚಕರ್ಮ ಆರೋಗ್ಯ ಶಿಬಿರ
ಕಲಬುರಗಿ: ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಆನಂದ್ ಹೋಟೆಲ್ ಸಮೀಪದ ಎಸ್.ಬಿ. ಟೆಂಪಲ್ ರಸ್ತೆಯಲ್ಲಿರುವ ಡಾ. ಶೆಟ್ಟೀಸ್ ಆಯುರ್ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಕೇಂದ್ರದಲ್ಲಿ ಉಚಿತ ಆಯುರ್ವೇದ ಹಾಗೂ ಪಂಚಕರ್ಮ ಆರೋಗ್ಯ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿ ಮಾತನಾಡಿದ ಆಯುರ್ವೇದ ತಜ್ಞೆ ಡಾ. ರಕ್ಷಾ ಎಸ್. ಶೆಟ್ಟಿ, ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯಕರ ಜೀವನಶೈಲಿ ಮತ್ತು ರೋಗನಿರೋಧಕ ದಿನಚರಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಕೃತಿ ವಿಶ್ಲೇಷಣೆ ಮತ್ತು ನಾಡಿ ಪರೀಕ್ಷೆ ನಡೆಸಲಾಯಿತು. ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ, ಸಂಧಿನೋವು, ಆತಂಕ, ಚರ್ಮರೋಗ ಸೇರಿದಂತೆ ವಿವಿಧ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಕುರಿತು ಆಯುರ್ವೇದ ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು.
ಅಭ್ಯಾಂಗ, ಶಿರೋಧಾರಾ, ನಸ್ಯ, ಕಟಿಬಸ್ತಿ ಸೇರಿದಂತೆ ವಿವಿಧ ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಫ್ಯಾಟಿ ಲಿವರ್, ಕಾಮಾಲೆ ಹಾಗೂ ಇತರ ಯಕೃತ್ತಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಲಭ್ಯವಿರುವ ಚಿಕಿತ್ಸಾ ವಿಧಾನಗಳು ಮತ್ತು ಲಿವರ್ ಡಿಟಾಕ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
6 ತಿಂಗಳಿಂದ 16 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಸುವರ್ಣ ಬಿಂದು ಪ್ರಾಶನ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಚರ್ಮದ ಕಪ್ಪುಕಲೆ, ಹೈಪರ್‌ಪಿಗ್ಮೆಂಟೇಶನ್, ಅಜೀರ್ಣ, ಮಲಬದ್ಧತೆ ಹಾಗೂ ಮನೋವಿಕಾರಗಳಿಗೆ ಸಂಬಂಧಿಸಿದ ಆಯುರ್ವೇದ ಚಿಕಿತ್ಸಾ ವಿಧಾನಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಸತ್ಯನಾಥ ಶೆಟ್ಟಿ, ವನಿತಾ ಚಂದ್ರಕಾಂತ ಗುತೇದಾರ್, ಜ್ಯೋತಿ ಅರುಣಕುಮಾರ ಪಾಟೀಲ್, ಸ್ವಾತಿ ಮಾಲು ಹಾಗೂ ಡಾ. ಪಾರ್ವತಿ ಉಪಸ್ಥಿತರಿದ್ದರು.