Chitapur | ಅ.7ರಂದು ನಾಗಾವಿ ಯಲ್ಲಮ್ಮ ದೇವಸ್ಥಾನದ ಪಲ್ಲಕ್ಕಿ ಮಹೋತ್ಸವದ ಪೂರ್ವಸಿದ್ಧತಾ ಸಭೆ : ಹಿರೇಮಠ
ನಾಗಯ್ಯ ಹಿರೇಮಠ
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಪಲ್ಲಕ್ಕಿ ಮಹೋತ್ಸವ (ಜಾತ್ರೆ) ಇದೇ ಅ.26ರಂದು ಜರುಗಲಿರುವ ಹಿನ್ನೆಲೆಯಲ್ಲಿ, ಅ.7ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ಕರೆಯಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪಲ್ಲಕ್ಕಿ ಮಹೋತ್ಸವದ ಸಿದ್ಧತೆ, ವ್ಯವಸ್ಥೆಗಳು ಹಾಗೂ ಕಾರ್ಯಕ್ರಮದ ಕುರಿತು ಸಲಹೆ-ಸೂಚನೆಗಳನ್ನು ಪಡೆಯುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ಸಭೆಗೆ ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ವಿದ್ಯುತ್ ಪ್ರಸರಣ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಚಿತ್ತಾಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು, ಅಗ್ನಿಶಾಮಕ ಠಾಣಾಧಿಕಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿತ್ತಾಪುರ ಘಟಕದ ವ್ಯವಸ್ಥಾಪಕರು, ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಆಗಮಿಸುವಂತೆ ಕೋರಲಾಗಿದೆ.
ಅಲ್ಲದೆ, ಚಿತ್ತಾಪುರ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸದಸ್ಯರು, ರತ್ನಾಕರ ನಾಯಕ ಸರಾಫ್, ಗೌತಮ್ ರಾಮರಾವ ನಾಯಕ, ದೇವಸ್ಥಾನದ ಅರ್ಚಕರು ಹಾಗೂ ಚಿತ್ತಾಪುರದ ಎಲ್ಲ ಸಮಾಜಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಪಲ್ಲಕ್ಕಿ ಮಹೋತ್ಸವದ ಯಶಸ್ವಿ ಆಯೋಜನೆಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡುವಂತೆ ಪತ್ರಿಕಾ ಪ್ರಕಟಣೆ ಮೂಲಕ ಕೋರಲಾಗಿದೆ.