Kalaburagi | ಶರಣಬಸವೇಶ್ವರ ದೇವಸ್ಥಾನ, ದಾಸೋಹ ಮಹಾಮನೆಯ ಸಮಗ್ರ ಮ್ಯಾಪಿಂಗ್ಗೆ ಚಾಲನೆ
ಕಲಬುರಗಿ: ವಿಶ್ವ ವಾಸ್ತುಶಿಲ್ಪ ದಿನಾಚರಣೆ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಿಂದ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಹಾಗೂ ದಾಸೋಹ ಮಹಾಮನೆಯ ಸಮಗ್ರ ನಕ್ಷೆ ರೂಪಿಸುವ (ಮ್ಯಾಪಿಂಗ್) ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಮ್ಯಾಪಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಹಿರಿಯ ಪ್ರಾಧ್ಯಾಪಕ ಹಾಗೂ ಖ್ಯಾತ ವಾಸ್ತುಶಿಲ್ಪಿ ಪ್ರೊ. ಅಜಯ್ ಚಂದ್ರನ್ ಸಿ.ಕೆ. ಸೇರಿದಂತೆ ಹಿರಿಯ ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪ ವಿಭಾಗದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದೇವಸ್ಥಾನ ಮತ್ತು ಅದರ ಸಮಗ್ರ ಸಂಕೀರ್ಣದ ವಾಸ್ತುಶಿಲ್ಪ, ವಿನ್ಯಾಸ ಹಾಗೂ ಐತಿಹಾಸಿಕ ವಿವರಗಳನ್ನು ದಾಖಲಿಸುವ ಕಾರ್ಯ ಕೈಗೊಂಡಿದ್ದಾರೆ. ಹಿರಿಯ ವಾಸ್ತುಶಿಲ್ಪಿ ಕಲ್ಯಾಣಿ ಅವರೂ ಈ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಶರಣಬಸವೇಶ್ವರ ದೇವಸ್ಥಾನದೊಂದಿಗೆ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ದಾಸೋಹ ಮಹಾಮನೆಯನ್ನೂ ಮ್ಯಾಪಿಂಗ್ ಕಾರ್ಯದಲ್ಲಿ ಸೇರಿಸಲಾಗಿದೆ. 18ನೇ ಶತಮಾನದ ಸಂತ ಶರಣಬಸವೇಶ್ವರರು ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ಅನ್ನ ನೀಡುವ ‘ದಾಸೋಹ’ವನ್ನು ಜೀವನ ಪದ್ಧತಿಯಾಗಿ ರೂಪಿಸಿದ್ದರು. ಶರಣಬಸವೇಶ್ವರರು ತಮ್ಮ ಜೀವನದ ಬಹುಭಾಗವನ್ನು ಕಲಬುರಗಿಯಲ್ಲೇ ಕಳೆದಿದ್ದು, ಮಹಾಮನೆಯಲ್ಲಿ ವಾಸವಾಗಿದ್ದರು ಎನ್ನಲಾಗುತ್ತದೆ.
ಸುಮಾರು 250 ವರ್ಷಗಳ ಹಿಂದೆ ಶರಣಬಸವೇಶ್ವರರು ಬೆಳಗಿಸಿದ ‘ನಂದಾದೀಪ’ ಇಂದಿಗೂ ಮಹಾಮನೆಯಲ್ಲಿ ನಿರಂತರವಾಗಿ ಬೆಳಗುತ್ತಿರುವುದು ಈ ಸ್ಥಳದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೇ ಮಹಾಮನೆಗೆ 1927ರ ಫೆಬ್ರವರಿ 26ರಂದು ಮಹಾತ್ಮ ಗಾಂಧೀಜಿ ಭೇಟಿ ನೀಡಿ, ಸಂಸ್ಥಾನದ 7ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರನ್ನು ಭೇಟಿಯಾಗಿದ್ದರು. ಶರಣಬಸವೇಶ್ವರ ದೇವಸ್ಥಾನದ ಮೇಲೆ ರಜಾಕಾರರು ನಡೆಸಿದ ದಾಳಿಯನ್ನು ಖಂಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಗಾಂಧೀಜಿ ಅವರು ಮಹಾಮನೆಗೆ ಭೇಟಿ ನೀಡಿದ್ದರು ಎಂದು ತಿಳಿಸಲಾಯಿತು.
ಐತಿಹಾಸಿಕ ಕಟ್ಟಡಗಳು ಮತ್ತು ಪರಂಪರೆಯ ತಾಣಗಳ ವಾಸ್ತುಶಿಲ್ಪ, ವಿನ್ಯಾಸ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವೈಜ್ಞಾನಿಕವಾಗಿ ದಾಖಲಿಸುವ ಉದ್ದೇಶದಿಂದ ಕೈಗೊಂಡಿರುವ ಈ ಮ್ಯಾಪಿಂಗ್ ಕಾರ್ಯವು ಮುಂದಿನ ಪೀಳಿಗೆಗೆ ಕಲಬುರಗಿಯ ಶ್ರೀಮಂತ ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರೊ. ಅಜಯ್ ಚಂದ್ರನ್, ವಾಸ್ತುಶಿಲ್ಪ ವಿಭಾಗದ ಡೀನ್ ಪ್ರೊ. ವೈಭವಕುಮಾರ ನವಣಿ, ವಿಭಾಗದ ಮುಖ್ಯಸ್ಥೆ ಪ್ರೊ. ಪಲ್ಲವಿ ಪಾಟೀಲ, ಪ್ರೊ. ಗೌತಮ್, ಸಂಯೋಜಕ ಪ್ರೊ. ಸಿದ್ದಲಿಂಗ ಮಂಠಾಳೆ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಬಸವರಾಜ ದೇಶಮುಖ ಅವರು ವಾಸ್ತುಶಿಲ್ಪ ವಿಭಾಗದ ವಿವಿಧ ಚಟುವಟಿಕೆಗಳ ವಿವರಗಳನ್ನು ಒಳಗೊಂಡ ‘ಆರ್ಕಿಟೆಕ್ಚರ್ ಮ್ಯಾಗಜಿನ್ 2025–26’ ಅನ್ನು ಬಿಡುಗಡೆ ಮಾಡಿದರು.