ಕಾಳಗಿ | ಬರಗಾಲ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ
ಕಾಳಗಿ : ವಾಡಿಕೆಯಂತೆ ಮುಂಗಾರು ಮಳೆಯಾಗದೆ ಬಿತ್ತನೆ ಕುಂಠಿತಗೊಂಡಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಿಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಠಾಧೀಶರು ಹಾಗೂ ರೈತರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜೂನ್ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ತಾಲೂಕಿನಲ್ಲಿ ಎಲ್‌ನಿನೋ ಪರಿಣಾಮದಿಂದ ಬರಗಾಲದ ಛಾಯೆ ಆವರಿಸಿದೆ ಎಂದು ಹೇಳಿದರು.
ರೈತರು ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಅಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರೂ, ತೇವಾಂಶದ ಕೊರತೆಯಿಂದ ಹೆಸರು, ಉದ್ದು, ತೊಗರಿ ಹಾಗೂ ಸೋಯಾಬೀನ್ ಬೆಳೆಗಳು ಮೊಳಕೆಯೊಡೆಯದೆ ಒಣಗುತ್ತಿವೆ. ವಿಶೇಷವಾಗಿ ಹೆಸರು ಮತ್ತು ಉದ್ದು ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರ ಸ್ಥಿತಿ ಆತಂಕಕಾರಿಯಾಗಿದೆ ಎಂದು ತಿಳಿಸಿದರು.
ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಬಿತ್ತನೆ ಕುಂಠಿತಗೊಂಡಿದೆ. ಮುಂಗಾರು ಬೆಳೆಯೇ ರೈತರ ಜೀವನಾಧಾರವಾಗಿದ್ದು, ಬೆಳೆ ನಷ್ಟದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನೀರಿನ ಕೊರತೆಯಿಂದ ನೀರಾವರಿ ಕಬ್ಬು ಬೆಳೆಯೂ ಒಣಗುತ್ತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಬೆಣ್ಣೆತೋರಾ ಹಾಗೂ ಗಂಡೋರಿ ನಾಲಾ ಅಣೆಕಟ್ಟುಗಳಿಂದ ತಕ್ಷಣ ನಾಲೆಗಳಿಗೆ ನೀರು ಹರಿಸಬೇಕು. ರಾಜ್ಯ ಸರ್ಕಾರ ಬರಗಾಲ ಘೋಷಿಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಿ ಗೋಶಾಲೆಗಳನ್ನು ತೆರೆಯಬೇಕು. ಮೋಡ ಬಿತ್ತನೆ ಕೈಗೊಳ್ಳಬೇಕು. ಕಳೆದ ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ವೃದ್ಧಾಪ್ಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಂತರ ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಟಕಲ್ ರೇವಣಸಿದ್ಧ ಶಿವಾಚಾರ್ಯರು, ರೇವಣಸಿದ್ಧ ಶರಣರು, ಕೋಡ್ಲಿ ಬಸವಲಿಂಗ ಶಿವಾಚಾರ್ಯರು, ಪರಮೇಶ್ವರ ಕಾಂತಾ, ದಿಲೀಪ್ ನಾಗೂರೆ, ತುಳುಜಪ್ಪಾ ಮೊಟಾ, ಸಿದ್ದಪ್ಪಾ, ಶಬ್ಬಿರ ಮಿಯ್ಯಾ, ಆನಂದ ತೆಗಲತಿಪ್ಪಿ ಸೇರಿದಂತೆ ಅನೇಕರು ಇದ್ದರು.