ಚಿತ್ತಾಪುರ: ಸರ್ಕಾರದಿಂದ ಸಿಗುವ ಸ್ತ್ರೀಶಕ್ತಿ, ಗೃಹಲಕ್ಷ್ಮಿ, ಮಾತೃ ವಂದನಾ ಹಾಗೂ ಉದ್ಯೋಗಿನಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಆರತಿ ತುಪ್ಪದ ಕರೆ ನೀಡಿದರು.

ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಳೆ ಶಹಾಬಾದ್ ವಲಯದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ತಾಲೂಕು ಮಟ್ಟದ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗಾಗಿ ಇರುವ ಸುಕನ್ಯಾ ಸಮೃದ್ಧಿ ಹಾಗೂ ಭಾಗ್ಯಲಕ್ಷ್ಮಿ ಯೋಜನೆಗಳ ಮಾನದಂಡಗಳ ಕುರಿತು ವಿವರಿಸಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ದೊರೆಯುವ ಪೌಷ್ಟಿಕ ಆಹಾರದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.

ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಮಾತನಾಡಿ, ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸಂಪರ್ಕಿಸಬೇಕಾದ ತುರ್ತು ಸಹಾಯವಾಣಿ ಸಂಖ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ಮನೆಗಳಲ್ಲಿ ಅಡುಗೆ ಅನಿಲ ಬಳಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಿಲಿಂಡರ್ ಲೀಕೇಜ್ ಅಥವಾ ಅಕಸ್ಮಿಕವಾಗಿ ಬೆಂಕಿ ಸಂಭವಿಸಿದಾಗ ಅದನ್ನು ನಂದಿಸಲು ಕೈಗೊಳ್ಳಬೇಕಾದ ಪ್ರಾಯೋಗಿಕ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು.

ಸ್ವ-ಉದ್ಯೋಗ ಘಟಕಕ್ಕೆ ಭೇಟಿ ನೀಡಿದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯೆ ಪ್ರಭಾವತಿ ಅವರಿಂದ ಅಗರಬತ್ತಿ, ದೀಪದ ಬತ್ತಿ ಹಾಗೂ ಧೂಪ ತಯಾರಿಕೆಯ ಕುರಿತು ತರಬೇತಿ ಮತ್ತು ಮಾಹಿತಿ ಪಡೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor