ಕಲಬುರಗಿ: ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಸರ್ಕಾರದ ಉದ್ದೇಶವೇ ವಿಫಲವಾಗುತ್ತಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದಿವಾಸಿ ಅಲೆಮಾರಿ ಬುಡಕಟ್ಟು ಮೂಲನಿವಾಸಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಗೋಪಾಲ ಎಂ.ಪಿ. ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಮಕ್ಕಳ ಪೌಷ್ಟಿಕತೆಗಾಗಿ ಜಾರಿಗೊಳಿಸಿರುವ ಕೂಸಿನ ಮನೆ ಯೋಜನೆಗೆ ಸಾಕಷ್ಟು ಅನುದಾನವಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿದರು.

2026-27ನೇ ಸಾಲಿನ ತ್ರೈಮಾಸಿಕ ಅನುದಾನವಾಗಿ ಜಿಲ್ಲೆಗೆ ಸುಮಾರು 74.37 ಲಕ್ಷ ರೂ. ಬಿಡುಗಡೆಯಾಗಿದ್ದು, 209 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ ಕೇಂದ್ರಗಳನ್ನು ನಡೆಸಲು ಹಾಗೂ 4,483 ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಅನುದಾನ ಮೀಸಲಿಡಲಾಗಿದೆ. ನಿಯಮದಂತೆ ಪ್ರತಿ ಮಗುವಿಗೆ ದಿನಕ್ಕೆ 12 ರೂ. ರಂತೆ 75 ದಿನಗಳವರೆಗೆ ಪೌಷ್ಟಿಕ ಆಹಾರ ಒದಗಿಸಬೇಕಿದೆ. ಆದರೆ ಅನುದಾನ ಬಿಡುಗಡೆಯಾಗಿ ಹಲವು ತಿಂಗಳು ಕಳೆದರೂ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರಗಳು ಆರಂಭವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಎಂದು ಹೇಳಿದರು.

ಕೇರ್‌ಟೇಕರ್‌ಗಳಿಗೆ ಗೌರವಧನ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸದೆ ಅನುದಾನ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, ದುರ್ಬಳಕೆಯಾಗಿರುವ ಹಣವನ್ನು ವಸೂಲಿ ಮಾಡಬೇಕು. ಅಗತ್ಯವಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅನುಕೂಲವಾಗುವಂತೆ ಹಾಗೂ ಬಯಲು ಶೌಚಮುಕ್ತ ಗ್ರಾಮಗಳ ನಿರ್ಮಾಣದ ಉದ್ದೇಶದಿಂದ ಜಾರಿಗೊಳಿಸಲಾದ ಹೈಟೆಕ್ ಶೌಚಾಲಯ ಯೋಜನೆಯ ಕಾಮಗಾರಿಗಳಲ್ಲೂ ಲೋಪವಾಗಿದೆ ಎಂದು ಗೋಪಾಲ ಎಂ.ಪಿ. ಆರೋಪಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗಿರುವ ಕುರಿತು ಸರ್ಕಾರ ಸಮಗ್ರ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಸಚಿವರ ನಿವಾಸದ ಮುಂದೆ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗೋಪಾಲ ಎಂ.ಪಿ. ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor