Chitapur | ಅಂಬೇಡ್ಕರ್ ಪುತ್ಥಳಿಯ ಸುತ್ತ ಕಾಂಪೌಂಡ್ ಕಾಮಗಾರಿಗೆ ಚಾಲನೆ
ಅಂಬೇಡ್ಕರ್ ಪುತ್ಥಳಿ ಆವರಣದ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳಿಸಿ : ಭಾರತಿ ದಂಡೋತಿ
ಚಿತ್ತಾಪುರ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಂಡು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಸೂಚಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಗರೋತ್ಥಾನ ಫೇಸ್-4 ವಿಶೇಷ ಅನುದಾನ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಅಂಬೇಡ್ಕರ್ ಪುತ್ಥಳಿ ಸುತ್ತಲಿನ ಕಾಂಪೌಂಡ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಪುತ್ಥಳಿ ಸುತ್ತಲೂ ಸುಸಜ್ಜಿತ, ಆಕರ್ಷಕ ಹಾಗೂ ಉತ್ತಮ ಗುಣಮಟ್ಟದ ಕಾಂಪೌಂಡ್ ನಿರ್ಮಿಸಬೇಕು. ಕಾಮಗಾರಿಯಲ್ಲಿ ಯಾವುದೇ ರೀತಿಯ ಗುಣಮಟ್ಟದ ಕೊರತೆ ಕಂಡುಬರದಂತೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ನೂತನ ಕಾಂಪೌಂಡ್ ನಿರ್ಮಿಸಲು ಅನುದಾನ ನೀಡುವಂತೆ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ 50 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.
ಪ್ರಸ್ತುತ ಇರುವ ಅಂಬೇಡ್ಕರ್ ಪುತ್ಥಳಿಯ ಬದಲಿಗೆ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ದೊಡ್ಡ ಪುತ್ಥಳಿ ಸ್ಥಾಪಿಸುವ ಉದ್ದೇಶವಿದ್ದು, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆದ್ದರಿಂದ ಪ್ರಸ್ತುತ ನಡೆಯುತ್ತಿರುವ ಕಾಂಪೌಂಡ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದಂತೆ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣೂರಕರ್, ಮುಖಂಡರಾದ ಶ್ರೀಕಾಂತ್ ಸಿಂಧೆ, ಜಗನ್ನಾಥ್ ಮೂಡಬೂಳಕರ್, ದೇವಿಂದ್ರ ಕುಮಸಿ, ರಾಜಪ್ಪ ಹುಂಡೇಕರ್, ನಾಗು ಕಲ್ಲಕ್, ನಾಗೇಂದ್ರ ಬುರ್ಲಿ, ಮಲ್ಲಿಕಾರ್ಜುನ ಕಲ್ಮರಿ, ಬಸವರಾಜ್ ಮೂಡಬೂಳಕರ್, ಕಾರ್ತಿಕ್ ಕಲ್ಲಕ್, ಶಿವು ಆರಬೋಳ, ಪುರಸಭೆ ಜೆಇ ಭೀಮರಾವ್ ಪಾಟೀಲ, ಸಿಬ್ಬಂದಿಗಳಾದ ಲೋಹಿತ್ ಕಟ್ಟಿಮನಿ, ರಾಜಕುಮಾರ ಸೇರಿದಂತೆ ಇತರರು ಇದ್ದರು.