ಎಲ್ಲಾ ಹಗರಣಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಲಿ : ಛಲವಾದಿ ನಾರಾಯಣಸ್ವಾಮಿ
ಕಲಬುರಗಿ: ಕಾಂಗ್ರೆಸ್ ಪಕ್ಷದಲ್ಲಿ ಗಂಡಸ್ತನ ಇರೋರು ಯಾರು ಇಲ್ಲ ಅಂದುಕೊಂಡಿದ್ದೆ. ಈಗ ಬಿ.ಆರ್.ಪಾಟೀಲ್ ಅವರು ಗಂಡಸ್ತನ ತೋರಿಸುತ್ತಿದ್ದಾರೆ. ಹಗರಣ ಹೊರಹಾಕಿದ ಪಾಟೀಲರಿಗೆ ಕೃತಜ್ಞತೆ ಹೇಳುತ್ತೇನೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಭ್ರಷ್ಟಾಚಾರ ತುಂಬಿದೆ ಎಂದರೇ ಆ ಮಾತಿಗೆ ಗೌರವ ಇಲ್ಲ. ಈಗ ತಮ್ಮ ಪಕ್ಷದವರರೇ ತಿರುಗಿ ಬಿದ್ದಿದ್ದಾರೆ. ದಿನಕ್ಕೊಂದು ಸರಕಾರದ ಹಗರಣಗಳು ಹೊರಗೆ ಬರುತ್ತಿವೆ ಎಂದ ಅವರು, ಶಾಸಕ ಬಿ.ಆರ್.ಪಾಟೀಲ್ ಅವರ ಜೊತೆ ಮಾತನಾಡಿದರೆ, ಭ್ರಷ್ಟಾಚಾರ ಮುಗಿಯುತ್ತಾ? ಕೇವಲ ಅಧಿಕಾರಿಗಳು ಮಾತ್ರ ಭ್ರಷ್ಟಾಚಾರ ಮಾಡುತ್ತಿದ್ದಾರಾ? ಈ ಹಿಂದೇ ನಡೆದ ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ಮುಡಾ ಸೈಟ್ ಕೇಸ್ ಗಳು ಏನಾದವು.? ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲ ಸಿಎಂ ಅವರು ಉತ್ತರ ನೀಡಲಿ ಎಂದು ಹೇಳಿದರು.
ಬಡವರ ಹಣ ತಿಂದವರು ಹುಳ ಬಿದ್ದು ಸಾಯಲಿ ಎನ್ನುವ ಸಚಿವ ಝಮೀರ್ ಖಾನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇಂತಹ ಎಮೋಷನಲ್ ಕಥೆಗಳಿಗೆ ನಾನು ಉತ್ತರ ಕೊಡಲ್ಲ. ಪಾಪ ಅವರು ತಿನ್ನದೆ ಇರಬಹುದು. ಆದರೆ ತೆಗೆದುಕೊಂಡು ಯಾರಿಗೆ ಕೊಟ್ಟರು ಎಂದು ತಿಳಿಸಬೇಕು. ಬಿಹಾರ್ ಎಲೆಕ್ಷನಿಗಾ? ಅಥವಾ ಬೇರೆ ಎಲೆಕ್ಷನಿಗಾ? ಎನ್ನುವುದು ಹೇಳಬೇಕು. ಬರೀ ಗ್ಯಾರಂಟಿ ಬಿಟ್ಟರೆ ಜನರಿಗೆ ಯಾವ ಗ್ಯಾರಂಟಿ ಸಹ ಇಲ್ಲ. ಜನರ ರಕ್ತ ಹೀರುವ ಕೆಲಸ ಮಾಡಬಾರದು ಎಂದರು
ರಿಪಬ್ಲಿಕ್ ಆಫ್ ಗುಲ್ಬರ್ಗಾ ಆಗುತ್ತಿದೆ:
ಬಿಜೆಪಿ ಅವರು ಇರುವ ಏರಿಯಾಗೆ ನೀರು ಬಂದಿಲ್ಲ ಏಕೆ? ಎಂದು ಸ್ಟೇಟಸ್ ಹಾಕಿದಕ್ಕೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಲಾಗಿದೆ. ಗುಲ್ಬರ್ಗಾ ರಿಪಬ್ಲಿಕ್ ಆಫ್ ಗುಲ್ಬರ್ಗಾ ಆಗುತ್ತಿದೆ. ಬಿಜೆಪಿ ಮುಖಂಡರನ್ನು ಓಡಾಡಲು ಬಿಡಲ್ಲ ಎಂದು ಮಂತ್ರಿ ಹಿಡಿದು ಎಲ್ಲರೂ ಹೇಳಿದರು. ಈಗ ಆ ಹೇಳಿಕೆಯಂತೆ ಎಲ್ಲಾ ಕಡೆಯಲ್ಲಿ ನಡೆಯುತ್ತಿದೆ. ಈ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲ. ನನ್ನನ್ನು 5 ತಾಸು ಕೂಡಿ ಹಾಕಿದರು. ಇದರ ಬಗ್ಗೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಒಬ್ಬರು ಒಂದೇ ಒಂದು ಸಾರಿಯೂ ಕೂಡ ಮಾತನಾಡಲಿಲ್ಲ. ಹೀಗಾಗಿ, ನಮ್ಮ ಕಾರ್ಯಕರ್ತರ ರಕ್ಷಣೆಯನ್ನು ನಾವು ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ಮತ್ತಿಮಡು, ಅಶೋಕ್ ಬಗಲಿ, ಶಿವರಾಜ್ ಪಾಟೀಲ್, ಹರ್ಷಾನಂದ್ ಗುತ್ತೇದಾರ್, ಪರಶುರಾಮ್ ಯಾದಗೀರ್, ಬಸವರಾಜ್ ಬೆನ್ನೂರು, ಶೋಭಾ ಬಾಣಿ, ಸಂತೋಷ್ ಹಾದಿಮನಿ ಶಿವರಾಜ್ ಮೂಲಗೆ ಮತ್ತಿತರರು ಇದ್ದರು.