×
Ad

ಮೂಢನಂಬಿಕೆ, ಅಂಧಕಾರ, ಕಂದಾಚಾರದಿಂದ ಹೊರಬನ್ನಿ: ನಿಜಗುಣಪ್ರಭು ಸ್ವಾಮೀಜಿ

Update: 2025-05-04 14:49 IST

ಕಲಬುರಗಿ: ಮೂಢನಂಬಿಕೆ, ಅಂಧಕಾರ, ಕಂದಾಚಾರದಿಂದ ಹೊರಬರಬೇಕು ಎಂದು ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ನಗರದ ಜಿಡಿಎ ಬಡಾವಣೆ ಗಾರ್ಡನ್ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬುದ್ಧ ಬಸವ ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಒಟ್ಟಾಗಿ ಆಚರಿಸಬೇಕು. ಶಬ್ದವೇ ಜಗತ್ತನ್ನು ಆಳುತ್ತದೆ ಎಂಬುದಕ್ಕೆ ಈ ಮಹನೀಯರ ಬೆಳಕಿನ ವಿಚಾರಗಳು ಸಾಕ್ಷಿಯಾಗಿದೆ ಎಂದರು.

ಮೇಲ್ವರ್ಗದವರು ಕಾನೂನಿಗೆ ಹೆದರಿ ಸಮಾನತೆ ಬಗ್ಗೆ ಒಣ ಮಾತನಾಡುತ್ತಾರೆ. ಇನ್ನೂ ಅಸ್ಪೃಶ್ಯತೆ, ಜಾತಿ ಪದ್ಧತಿ ಜೀವಂತವಾಗಿದೆ. ಅಂಬೇಡ್ಕರ್ ಕೊಟ್ಟ ಪ್ರಜಾಪ್ರಭುತ್ವದಲ್ಲಿ ಈಗ ಮಾತನಾಡುವುದೇ ದುಸ್ತರವಾಗಿದೆ. ಈ ಹಿಂದೆ ಬುದ್ಧ, ಬಸವರ ಕಾಲದಲ್ಲಿ ಪರಿಸ್ಥಿತಿ ಹೇಗಿರಬೇಡ? ಎಂದು ಆತಂಕ ವ್ಯಕ್ತಪಡಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಬಂಧಿಸಿಟ್ಟಿದ್ದೇವೆ. ದಲಿತರಿಗೆ ಬಸವಣ್ಣ ಯಾರು? ಎಂದು ಅರ್ಥವಾಗಬೇಕು. ಅಂದಾಗ ಮಾತ್ರ ಬುದ್ಧ, ಅಂಬೇಡ್ಕರ್ ಯಾರು? ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹೇಳಿದ ಬಸವಣ್ಣ ಧರ್ಮಕ್ಕೆ ಹೊಸ ಭಾಷ್ಯೆ ಬರೆದರು. ಕೈಲಾಸ ಮುಕ್ತಿಗೆ ಕಾಯಕ ಎಂದು ಎಲ್ಲರೂ ಕಾಯಕ ಮಾಡಿ ಉಣ್ಣಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ಕೊಟ್ಟ ಶಿಕ್ಷಣದಿಂದ ಅರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಆದರೆ ಹೃದಯ ಪರಿವರ್ತನೆ ಆಗಿಲ್ಲದಿರುವುದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಬಿದ್ದವರನ್ನು ಮೇಲೆತ್ತಿದವರು. ಮನುಷ್ಯರನ್ನು ಮನುಷ್ಯರಂತೆ ಕಾಣದ ಈ ದೇಶದಲ್ಲಿ ಸಮಾನತೆ ಸಾರಿದ ಮಹಾನ್ ಪುರುಷರು ಎಂದು ಅಭಿಪ್ರಾಯಪಟ್ಟರು.

ಸಂವಿಧಾನ ರಚನೆ ಹಾಗೂ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ಇಲ್ಲ ಸಲ್ಲದ ಮಾತನಾಡುತ್ತಾರೆ. ತಮ್ಮನ್ನು ಸೋಲಿಸಿದವರು ಸಾವರ್ಕರ್ ಎಂಬುದನ್ನು ಸ್ವತಃ ಅಂಬೇಡ್ಕರ್ ಅವರು ಬರೆದಿಟ್ಟಿದ್ದಾರೆ ಎಂದರು.

ಜಾಗತಿಕ ಲಿಂಗಾಯತ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ವೇದಿಕೆಯಲ್ಲಿದ್ದರು.

ಬೆಂಗಳೂರು ಲುಂಬಿನಿ ಬುದ್ಧ ವಿಹಾರದ ನಾಗರತ್ನ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಡಾ.‌ ಅಶೋಕ ತಳಕೇರಿ ನಿರೂಪಿಸಿದರು. ಮಲ್ಲಿಕಾರ್ಜುನ ಮದಾನೆ ಸ್ವಾಗತಿಸಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಶರಣಪ್ಪ ನಂದಗಿರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಾಮರಾವ ಶಿಲ್ದೆ ವಂದಿಸಿದರು.

ವೈಜನಾಥ ಬಾವಿಕಟ್ಟಿ, ಶಿವಪ್ಪ , ರಾಜಕುಮಾರ ಮರಗುತ್ತಿ, ಡಾ. ಹನುಮಂತರಾವ ದೊಡ್ಡಮನಿ, ಎ.ಬಿ. ಹೊಸಮನಿ, ಪ್ರವೀಣನಾಗ ಧೂಳೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News