ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ; ಸಿಪಿಐ(ಎಂ) ಜು.6ರಂದು ಬೃಹತ್ ಪ್ರತಿಭಟನೆ
ಕಲಬುರಗಿ: ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರು ಹಾಗೂ ಕಾರ್ಮಿಕರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಜುಲೈ 6ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಪ್ರಕಟಣೆ ನೀಡಿ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಪರಿಹಾರ ಕ್ರಮಗಳನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಲಬುರಗಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ತಕ್ಷಣ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವುದು, ರೈತರಿಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎಸ್) ಅಡಿಯಲ್ಲಿ ಉದ್ಯೋಗದ ದಿನಗಳನ್ನು 100ರಿಂದ 200 ದಿನಗಳಿಗೆ ಹೆಚ್ಚಿಸುವುದು ಹಾಗೂ ಬಾಕಿ ಇರುವ ಕೂಲಿಯನ್ನು ತಕ್ಷಣ ಪಾವತಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿಯೂ ಉದ್ಯೋಗ ಸೃಷ್ಟಿಸುವುದು, ಬಡಜನರ ಜೀವನೋಪಾಯ ರಕ್ಷಣೆಗಾಗಿ “ಕೂಲಿಗಾಗಿ ಕಾಳು” ಯೋಜನೆ ಜಾರಿಗೊಳಿಸುವುದು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಗತ್ಯ ವಸ್ತುಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ವಿಪತ್ತು ನಿರ್ವಹಣಾ ಸಮಿತಿಯು ತುರ್ತು ಕ್ರಮ ಕೈಗೊಂಡು ಜನರ ನೆರವಿಗೆ ಧಾವಿಸಬೇಕು ಎಂಬ ಬೇಡಿಕೆಯನ್ನೂ ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ.
ಜುಲೈ 6ರಂದು ಬೆಳಿಗ್ಗೆ ನಗರದ ಜಗತ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.