×
Ad

Kalaburagi | ವಿಯೆಟ್ನಾಂ ಇಂಡಸ್ಟ್ರಿಯಲ್ ವಿಶ್ವವಿದ್ಯಾಲಯದೊಂದಿಗೆ ಶರಣಬಸವ ವಿವಿ ಒಪ್ಪಂದ

ಸಂಶೋಧನೆ, ವಿದ್ಯಾರ್ಥಿ-ಅಧ್ಯಾಪಕರ ವಿನಿಮಯ

Update: 2026-07-05 20:07 IST

ಕಲಬುರಗಿ: ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಕಾರವನ್ನು ವಿಸ್ತರಿಸುವ ಉದ್ದೇಶದಿಂದ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯವು ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯ ಇಂಡಸ್ಟ್ರಿಯಲ್ ವಿಶ್ವವಿದ್ಯಾಲಯದೊಂದಿಗೆ ಐದು ವರ್ಷಗಳ ಅವಧಿಯ ಮಹತ್ವದ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಿದೆ.

ಒಪ್ಪಂದಕ್ಕೆ ವಿಯೆಟ್ನಾಂ ಇಂಡಸ್ಟ್ರಿಯಲ್ ವಿಶ್ವವಿದ್ಯಾಲಯದ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಬುಯಿ ಥನ್ಹ್ ಹಂಗ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಲಕ್ಷ್ಮೀ ಪಾಟೀಲ ಮಾಕಾ ಸಹಿ ಹಾಕಿ, ಒಪ್ಪಂದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಸಂಶೋಧನಾ ನಿರ್ದೇಶಕ ಪ್ರೊ. ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಎಸ್.ಎಚ್. ಹೊನ್ನಳ್ಳಿ, ಸಂಶೋಧನಾ ಡೀನ್ ಡಾ. ಸುಜಾತಾ ಮಲ್ಲಾಪುರ ಹಾಗೂ ಡೀನ್ ಡಾ. ಶಿವಕುಮಾರ ಜವಳಿಗಿ ಉಪಸ್ಥಿತರಿದ್ದರು.

ಒಪ್ಪಂದದಡಿ ಎರಡೂ ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನಾ ಯೋಜನೆಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಶೋಧನಾ ಅನುದಾನ, ಸಂಶೋಧನಾ ಲೇಖನಗಳು, ಪುಸ್ತಕಗಳು ಮತ್ತು ಸಮ್ಮೇಳನ ಪ್ರಬಂಧಗಳ ಪ್ರಕಟಣೆಯಲ್ಲಿ ಸಹಕರಿಸಲಿವೆ.

ಇದಲ್ಲದೆ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಇಂಟರ್ನ್‌ಶಿಪ್‌, ಪ್ರಾಜೆಕ್ಟ್‌ ಕಾರ್ಯಗಳು ಹಾಗೂ ಸಂಶೋಧನಾ ಭೇಟಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಧ್ಯಾಪಕರ ಪರಸ್ಪರ ವಿನಿಮಯ, ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿಯೂ ಸಹಭಾಗಿತ್ವ ಇರಲಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸಿಂಪೋಸಿಯಂಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಆಯೋಜಿಸುವ ಜೊತೆಗೆ, ಸಂಯುಕ್ತ ಸಂಶೋಧನೆಯಿಂದ ಉಂಟಾಗುವ ಬೌದ್ಧಿಕ ಆಸ್ತಿ ಹಕ್ಕುಗಳಿಗೂ ಸ್ಪಷ್ಟ ನಿಯಮಗಳನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ.

ಈ ಒಪ್ಪಂದದಿಂದ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಶೈಕ್ಷಣಿಕ ವಿನಿಮಯದ ಹೊಸ ಅವಕಾಶಗಳು ದೊರೆಯಲಿದ್ದು, ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಶೈಕ್ಷಣಿಕ ಬಾಂಧವ್ಯ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News