×
Ad

ರಾಮಮಂದಿರ ಹುಂಡಿ ಕಳ್ಳತನ ಪ್ರಕರಣದ ಶ್ರೇಯಸ್ಸು ಮೋದಿ ಪಡೆಯಲಿ : ಗೃಹ ಸಚಿವ ಪ್ರಯಾಂಕ್‌ ಖರ್ಗೆ

Update: 2026-07-05 22:51 IST

 ಕಲಬುರಗಿ : ದೇಶದ ಪ್ರತಿಯೊಂದು ಸಂಘಟನೆ ಕಾನೂನಿನ ವ್ಯಾಪ್ತಿಯಲ್ಲಿ ತನ್ನ ಹಣಕಾಸು ವ್ಯವಹಾರಗಳ ಕುರಿತು ಲೆಕ್ಕ ನೀಡಬೇಕಾಗಿದೆ. ಆದರೆ, ಆರೆಸ್ಸೆಸ್ ಮಾತ್ರ ತನ್ನ ಆದಾಯ, ವೆಚ್ಚ ಹಾಗೂ ತೆರಿಗೆ ಪಾವತಿ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಈ ಕುರಿತು ಕಾನೂನು ಬದ್ಧವಾಗಿ ಮಾಹಿತಿ ಕೇಳಿದ್ದು, ಇದುವರೆಗೆ ಯಾವುದೇ ಉತ್ತರ ನೀಡಿಲ್ಲ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ರಾಮಮಂದಿರ ಹುಂಡಿ ಕಳ್ಳತನ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿ, ದೇವರ ಹುಂಡಿ ಕಳ್ಳತನ ಮಾಡಿದವರಿಗೆ ’ಜಿ’ ಎಂದು ಗೌರವ ಯಾಕೆ? ಮರ್ಯಾದೆಗೆ ಅರ್ಹತೆ ಇಲ್ಲದವರಿಗೆ ಅಂತಹ ಸಂಬೋಧನೆ ಯಾಕೆ? ಎಂದು ವ್ಯಂಗ್ಯವಾಡಿದರು.

ರಾಮಮಂದಿರ ನಿರ್ಮಾಣದಿಂದ ಹಿಡಿದು ಪ್ರಾಣಪ್ರತಿಷ್ಠೆಯವರೆಗೆ ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ರೇಯಸ್ಸು ಪಡೆದಿದ್ದಾರೆ. ಹಾಗಿದ್ದರೆ ಹುಂಡಿ ಕಳ್ಳತನ ಪ್ರಕರಣದ ಬಗ್ಗೆಯೂ ಅವರು ಶ್ರೇಯಸ್ಸು ಪಡೆಯಲಿ ಎಂದ ಅವರು, ಈ ವಿಷಯವನ್ನು ‘ಮನ್ ಕಿ ಬಾತ್’ನಲ್ಲಿ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಆರೆಸ್ಸೆಸ್‌ ನೋಂದಣಿ, ಹಣಕಾಸು ವ್ಯವಹಾರ ಹಾಗೂ ತೆರಿಗೆ ಪಾವತಿ ಕುರಿತು ಮಾಹಿತಿ ಕೋರಿ ಪತ್ರ ಬರೆದಿದ್ದೇನೆ. ದಿನಕ್ಕೆ ಸಾವಿರಾರು ಶಾಖೆಗಳು, ಪಥಸಂಚಲನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಇಂತಹ ದೊಡ್ಡ ಸಂಘಟನೆ ತನ್ನ ಹಣಕಾಸಿನ ಲೆಕ್ಕವನ್ನು ಸಾರ್ವಜನಿಕರಿಗೆ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.

ತಮ್ಮ ಹಿಂದಿನ ಸಚಿವಾವಧಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಪಂಗಳಲ್ಲಿ ಸುಮಾರು 1,400 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, 1,600 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಟೆಕ್ಸ್ಟೈಲ್ಸ್ ಪಾರ್ಕ್‌ಗೆ 350 ಕೋಟಿ ರೂ. ಅನುದಾನ, ರೈತರಿಗೆ 640 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 7,000 ಪೊಲೀಸ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೆಸರು ಕೈಬಿಡದಂತೆ ಎಚ್ಚರಿಕೆ ವಹಿಸಬೇಕು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಉಂಟಾಗದಂತೆ ಎಲ್ಲರೂ ಜಾಗೃತರಾಗಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದರೂ ಸಮರ್ಪಕ ಉತ್ತರ ಬಂದಿಲ್ಲ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜಗದೇವ ಗುತ್ತೇದಾರ, ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಮಹೆಬೂಬ್ ಸಾಹೇಬ್ ಚಿಷ್ಟಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಸೇರಿದಂತೆ ಕಾಂಗ್ರೆಸ್ ನ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

2028ಕ್ಕೆ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ: ಕಮಕನೂರು

ಕಲಬುರಗಿ: ಗೃಹ, ಇ-ಆಡಳಿತ ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರಕಾರದ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ಸಚಿವರಾಗಿದ್ದು, 2028ರ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗೃಹ ಸಚಿವರಾಗಿ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಚಿವರಿಗೆ ದೊರೆತಿರುವ ಅಭೂತಪೂರ್ವ ಸ್ವಾಗತವೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಲಬುರಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆ ಸ್ಥಾಪನೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು 17 ಲಕ್ಷ ರೂ. ಅನುದಾನ ಮಂಜೂರು ಮಾಡಿರುವುದನ್ನು ಶ್ಲಾಘಿಸಿದ ಕಮಕನೂರು, ಪ್ರತಿಮೆ ಅನಾವರಣ ಸಮಾರಂಭಕ್ಕೆ ಲಕ್ಷಾಂತರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದರು. ಇದೇ ರೀತಿಯಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಯೂ ಅಂಬಿಗರ ಚೌಡಯ್ಯ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕೋಲಿ, ಕಬ್ಬಲಿಗ ಸೇರಿದಂತೆ ಸಮಾನಾರ್ಥಕ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ರಾಜಕೀಯ ಇಚ್ಛಾಶಕ್ತಿ ಪ್ರಿಯಾಂಕ್ ಖರ್ಗೆ ಅವರಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News