Chitapur | ಆರೆಸ್ಸೆಸ್ ನಿಷೇಧಕ್ಕೆ ಆಗ್ರಹಿಸಿ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
ಚಿತ್ತಾಪುರ: ರಾಜ್ಯದಲ್ಲಿ ಆರೆಸ್ಸೆಸ್ ನಿಷೇಧಿಸಬೇಕು ಎಂದು ಆಗ್ರಹಿಸಿ ಜು.7ರಂದು ಕಲಬುರಗಿಯಲ್ಲಿ ಲಚ್ಚಪ್ಪ ಜಮಾದಾರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಚಿತ್ತಾಪುರ ತಾಲೂಕಿನ ಕಾಂಗ್ರೆಸ್ ಮುಖಂಡರು ಬೆಂಬಲ ಘೋಷಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಹಣಮಂತ ಸಂಕನೂರ, ದೇವಿಂದ್ರ ಅರಣಕಲ್ ಹಾಗೂ ಬಸವರಾಜ ಚಿನ್ನಮಳ್ಳಿ, ದೇಶದಲ್ಲಿ ಸಂವಿಧಾನವೇ ಸರ್ವೋಚ್ಚವಾಗಿದ್ದು, ಅದರ ಪ್ರಕಾರವೇ ಪ್ರಜಾಪ್ರಭುತ್ವ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿವೆ. ಸಂವಿಧಾನ ಮತ್ತು ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.
ದೇಶ ನಮ್ಮದು, ನಮಗೆ ಸಂವಿಧಾನ ಹಾಗೂ ಕಾನೂನು ಅನ್ವಯಿಸುವುದಿಲ್ಲ ಎಂಬ ಮನೋಭಾವ ಅಪಾಯಕಾರಿಯಾಗಿದೆ. ಇಂತಹ ಮನೋಭಾವವನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಕುರಿತು ಎತ್ತಿರುವ ಪ್ರಶ್ನೆಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿವೆ. ಆ ಪ್ರಶ್ನೆಗಳಿಗೆ ಕಾನೂನುಬದ್ಧ ಉತ್ತರ ನೀಡುವ ಬದಲು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಾವುದೇ ಧರ್ಮಕ್ಕೆ ಸೇರಿದ ಸಂಘ-ಸಂಸ್ಥೆಗಳ ರಚನೆ ಮತ್ತು ನಿರ್ವಹಣೆಯನ್ನು ಸಂವಿಧಾನ ಹಾಗೂ ಸಂಘ-ಸಂಸ್ಥೆಗಳ ನೋಂದಣಿ ಕಾಯ್ದೆಯಡಿ ಕಾನೂನುಬದ್ಧವಾಗಿ ನಿಯಂತ್ರಿಸುವಂತೆ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಸಂವಿಧಾನದ ಅನುಚ್ಛೇದ 19(1)(ಸಿ) ಪ್ರಕಾರ ನಾಗರಿಕರಿಗೆ ಸಂಘ-ಸಂಸ್ಥೆಗಳನ್ನು ರಚಿಸುವ ಹಕ್ಕು ಇದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಗತ್ಯ ನಿರ್ಬಂಧಗಳನ್ನು ವಿಧಿಸುವ ಅಧಿಕಾರವೂ ಸರ್ಕಾರಗಳಿಗೆ ಇದೆ. ಈ ಅಧಿಕಾರವನ್ನು ಬಳಸಿಕೊಂಡು ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿಂಗಣ್ಣ ಹೆಗಲೇರಿ, ಭೀಮರಾಯ ಹೊತಿನಮಡಿ, ಮಲ್ಲಿಕಾರ್ಜುನ ಸಂಗಾವಿ, ಪ್ರಭು ಹಲಕರ್ಟಿ, ಬಸವರಾಜ ಮೈನಾಳಕರ್ ಇದ್ದರು.