ಚಿಂಚೋಳಿ: ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಅರಣ್ಯ ವಿಜ್ಞಾನ ಮಹಾವಿದ್ಯಾಲಯವನ್ನು ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ಸ್ಥಾಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಹೇಳಿದರು.

ತಾಲೂಕಿನ ಚಂದ್ರಂಪಳ್ಳಿ ವನ್ಯಜೀವಿಧಾಮದ ಕಾಟೇಜ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಕಾಲೇಜಿಗಾಗಿ ಗುರುತಿಸಲಾಗಿರುವ ಚಂದ್ರಂಪಳ್ಳಿ ತೋಟಗಾರಿಕಾ ಫಾರಂನ ಸುಮಾರು 150ರಿಂದ 160 ಎಕರೆ ಜಮೀನನ್ನು ಪರಿಶೀಲಿಸಿರುವುದಾಗಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವಿಜ್ಞಾನ ಮಹಾವಿದ್ಯಾಲಯ ಇಲ್ಲದ ಹಿನ್ನೆಲೆಯಲ್ಲಿ ಚಂದ್ರಂಪಳ್ಳಿಯಲ್ಲಿ ಕಾಲೇಜು ಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು, ಸಾಧ್ಯತಾ ವರದಿ ಸಲ್ಲಿಸುವಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಸಾಗರ್ ಖಂಡ್ರೆ ತಿಳಿಸಿದರು.

ಚಂದ್ರಂಪಳ್ಳಿ ಸುತ್ತಮುತ್ತ ದಟ್ಟ ಅರಣ್ಯ, ವೈವಿಧ್ಯಮಯ ವನ್ಯಜೀವಿ ಹಾಗೂ ಪಕ್ಷಿ ಸಂಕುಲ ಮತ್ತು ನೈಸರ್ಗಿಕ ಪರಿಸರ ಇರುವುದರಿಂದ ಅರಣ್ಯ ಕಾಲೇಜು ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಕಾಲೇಜು ಆರಂಭವಾದರೆ ಈ ಭಾಗದಲ್ಲಿ ಶಿಕ್ಷಣದ ಅವಕಾಶಗಳು ಹೆಚ್ಚುವುದರ ಜೊತೆಗೆ ಚಂದ್ರಂಪಳ್ಳಿ ಜಲಾಶಯದ ಬೋಟಿಂಗ್ ಸೇರಿದಂತೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕ್ಷೇತ್ರದಲ್ಲಿ 50 ಸಾವಿರ ಮನೆಗಳಿಗೆ ಮಂಜೂರಾತಿ ದೊರೆತಿದ್ದು, ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಬೆಳೆ ಪರಿಹಾರ ದೊರಕಿಸಿಕೊಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಹೆಚ್ಚಿನ ಪರಿಹಾರ ಹಾಗೂ ಅನುದಾನ ತರಲು ಮುಖ್ಯಮಂತ್ರಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರೈತರ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸಬೇಕು ಎಂದು ಸಾಗರ್ ಖಂಡ್ರೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಥೋಡ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲ್ಲಿ, ರಾಜ್ಯ ಬಾಲಭವನ ಉಪಾಧ್ಯಕ್ಷ ಅನಿಲಕುಮಾರ್ ಜಮಾದಾರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನರಸಿಂಹಲು ಕುಂಬಾರ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಚವ್ಹಾಣ, ವಲಯ ಅರಣ್ಯಾಧಿಕಾರಿಗಳಾದ ಸಂಜೀವಕುಮಾರ್ ಚವ್ಹಾಣ ಹಾಗೂ ಜಗನ್ನಾಥ ಕೋರಳ್ಳಿ ಸೇರಿದಂತೆ ಆನಂದ ಟೈಗರ್, ರಾಘವೇಂದ್ರ ಗುತ್ತೇದಾರ, ಸಂಜೀವ ರಾಣಾಪುರ, ಜನಾರ್ಧನ ಪಾಟೀಲ ಶಾದಿಪುರ, ಅಬ್ದುಲ್ ಬಾಸೀತ್, ಶರಣು ಪಾಟೀಲ, ಸಂತೋಷ ಗುತ್ತೇದಾರ, ಪ್ರವೀಣ ತೇಗಲತಿಪ್ಪಿ, ಅಜೀತ ಪಾಟೀಲ, ನಾಗೇಶ ಗುನಾಜಿ, ಅನಿಲಕುಮಾರ್ ಜಮಾದಾರ ಹೋಡದಳ್ಳಿ, ಉಮೇಶ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor