ಶರಣಬಸಪ್ಪ ಕೊಡ್ಲಾ

ಕಲಬುರಗಿ : ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪ್ರಕರಣ ದಾಖಲಿಸದೆ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಆಳಂದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡವರಲ್ಲಿ ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಹಾಗೂ ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಮತ್ತು ಸಾಯಬಣ್ಣ ಸೇರಿದ್ದಾರೆ.

1 ಲಕ್ಷಕ್ಕೆ ‘ಡೀಲ್’ ಆರೋಪ :

ಕಳೆದ ಸೋಮವಾರ ಮಧ್ಯರಾತ್ರಿ 112 ಸಹಾಯವಾಣಿಗೆ ಬಂದ ಮಾಹಿತಿಯ ಆಧಾರದ ಮೇಲೆ ಆಳಂದ ಪೊಲೀಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದರು ಎನ್ನಲಾಗಿದೆ. ವಾಹನವನ್ನು ಪೊಲೀಸ್ ಠಾಣೆಗೆ ತಂದ ಬಳಿಕ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ಹಣದ ವ್ಯವಹಾರ ನಡೆಸಿ ವಾಹನವನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ವಾಹನ ಬಿಡುಗಡೆಗಾಗಿ ಸುಮಾರು 1 ಲಕ್ಷ ರೂ. ಗೆ ‘ಡೀಲ್’ ನಡೆಸಲಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಲಾಖಾ ಮಟ್ಟದಲ್ಲಿ ನಡೆಸಿದ ವಿಚಾರಣೆಯಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಹಾಗೂ ಪ್ರಕರಣದ ನಿರ್ವಹಣೆಯಲ್ಲಿ ನಿಯಮಬಾಹಿರ ನಡೆ ಕಂಡುಬಂದ ಹಿನ್ನೆಲೆಯಲ್ಲಿ ಪಿಐ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor