ಗಾಂಧೀಜಿಯ ಸತ್ಯ, ಅಹಿಂಸಾ ತತ್ವಗಳನ್ನು ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಇಂದಿನ ಸಂಘರ್ಷಮಯ ವಿಶ್ವದಲ್ಲಿ ಮಹಾತ್ಮ ಗಾಂಧೀಜಿಯವರು ಜಗತ್ತಿಗೆ ನೀಡಿದ ಅತ್ಯುನ್ನತ ಮೌಲ್ಯಗಳಾದ 'ಸತ್ಯ' ಮತ್ತು 'ಅಹಿಂಸೆ' ತತ್ವಗಳು ಹೆಚ್ಚು ಪ್ರಸ್ತುತವೆನಿಸಿದ್ದು, ಇದನ್ನು ಮಕ್ಕಳು, ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ ನೀಡಿದರು.
ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಗಾಂಧೀಜಿಯವರ ಪ್ರಕಾರ ಸತ್ಯ ಎಂಬುದು ಕೇವಲ ಮಾತಿಗೆ ಸೀಮಿತವಾದುದಲ್ಲ. ಯಾವುದೇ ಅನ್ಯಾಯದ ವಿರುದ್ಧ ಹೋರಾಡುವಾಗ ಹಿಂಸೆಯ ದಾರಿ ಹಿಡಿಯದೆ, ಸತ್ಯದ ಪರವಾಗಿ ದಿಟ್ಟವಾಗಿ ನಿಲ್ಲುವುದೇ ನಿಜವಾದ 'ಸತ್ಯಾಗ್ರಹ' ಎಂದರು.
ಕಲಬುರಗಿ ಸಂತ ಜೋಸೆಫ್ ಪಿ.ಯು ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ಚಿ.ಸಿ.ನಿಂಗಣ್ಣ ಅವರು ವಿಶೇಷ ಉಪನ್ಯಾಸ ನೀಡಿದರು.
ಇದಕ್ಕು ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಟೌನ್ ಹಾಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾಲಾರ್ಪಣೆ ಮಾಡಿ ಬಾಪೂಜಿಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ ಅವರು ಇಸ್ಲಾಂ ಧರ್ಮ, ಕಲಬುರಗಿ ಸೆಂಟ್ ಮೇರಿ ಚರ್ಚ್ ಫಾದರ್ ರೊನಾಲ್ಡೋ ಅವರು ಕ್ರಿಶ್ಚಿಯನ್ ಧರ್ಮ ಹಾಗೂ ಕಲಬುರಗಿಯ ಶ್ರೀ ಗುರುನಾನಕ್ ಮಠದ ಗ್ರಂಥಿ ಭಾಯ್‌ದೀಪ್ ಸಿಂಗ್ ಅವರು ಸಿಖ್ ಧರ್ಮದ ಬಗ್ಗೆ ಬೋಧಿಸಿದರು. ಅದೇ ರೀತಿಯಲ್ಲಿ ಭಾರತ ಸೇವಾ ದಳದ ರಾಜ್ಯ ಸಂಪನ್ಮೂಲ ಶಿಕ್ಷಕ ಡಾ. ಶಿವಲಿಂಗಪ್ಪ ಗೌಳಿ ಅವರು ಹಿಂದೂ ಧರ್ಮ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ್ ಅವರು ಬೌದ್ಧ ಧರ್ಮ ಪಠಣ ಮಾಡಿದರು.
ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ:
ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿಭಾಗದಿಂದ ತಲಾ ಮೂವರು ಸೇರಿ ಒಟ್ಟು 9 ಜನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದೇವಣಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿವರಾಜ ಅಣಜಗಿ ನಿರೂಪಿಸಿದರು.