ಕಲಬುರಗಿ | ಪ್ರತಿಯೊಬ್ಬರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ಶೃಂಗೇರಿ
ಕಲಬುರಗಿ: ಸಮಾಜದ ಪ್ರತಿಯೊಬ್ಬರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡಬೇಕು ಎಂದು ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಹೇಳಿದರು.
ನಗರದ ಹಳೆಯ ಜಿಲ್ಲಾ ಪಂಚಾಯತ್ ಕಟ್ಟಡದ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತದಾರರ ಸಾಕ್ಷರತಾ ಸಂಘ ಅಡಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆ ಮೂಲಕ ಒಳ್ಳೆಯ ಚಾರಿತ್ರಿ ಉಳ್ಳ ವ್ಯಕ್ತಿಯನ್ನು ಆರಿಸಿ ಪ್ರಜಾಪ್ರಭುತ್ವದ ಬೇರು ಗಟ್ಟಿ ಮಾಡಬೇಕು ಎಂದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷರಾದ ಶಿವಾನಂದ್ ಖಜೂರಿ ಮಾತನಾಡಿ, ನೈಸರ್ಗಿಕವಾಗಿ ಭಾರತ ಶ್ರೀಮಂತವಾಗಿದೆ. ಯುವಕರಿಂದ ಕೂಡಿದ ರಾಷ್ಟ್ರವಾಗಿದೆ. ಪ್ರತಿಯೊಬ್ಬರು ನನ್ನ ಮತ ನನ್ನ ಹಕ್ಕು ತಿಳಿದುಕೊಂಡು ರಾಷ್ಟ್ರಕ್ಕೆ ಆಧಾರಸ್ತಂಭ ವಾಗುವ ನಾಯಕರನ್ನು ಆರಿಸಿ ತರಬೇಕು, ಆ ಮೂಲಕ ಸದೃಢ ಭಾರತ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನಿರ್ದೇಶಕರಾದ ಸುರೇಶ ಅಕ್ಕಣ್ಣ, ಇದು ಅತ್ಯಂತ ಮಹತ್ವದ ಕಾರ್ಯಕ್ರಮ. ವಿದ್ಯಾರ್ಥಿ ಸಮೂಹ ಮತದಾನ ಪ್ರಕ್ರಿಯೆ, ಮತದಾನದ ಹಕ್ಕು ಮತ್ತು ಚುನಾವಣೆ ಈ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಪ್ರಜಾಪ್ರಭುತ್ವದ ತತ್ವಗಳನ್ನು ಬಿತ್ತರಿಸುವ ಸಲುವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಎನ್ಎಸ್ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜೆ ಮಲ್ಲಪ್ಪ, ನಿವೃತ್ತ ಪ್ರಾಂಶುಪಾಲ ಬಸವರಾಜ ಬಿರಾದಾರ್, ಪ್ರಾಂಶುಪಾಲರಾದ ಜಯಶ್ರೀ ಪಾಟೀಲ್, ರಾಜ್ಯ ಪರಿಷತ್ತಿನ ಸದಸ್ಯರಾದ ಧರ್ಮರಾಯ ಜವಳಿ, ಡಾ.ಭೀಮರಾಯ ಅರಿಕೇರಿ ಉಮೇಶ್ ಅಷ್ಟಗಿ, ಡಾ.ಭಿಮರಾಯ ಅರಿಕೇರಿ, ಬಾಬುಮಿಯ ಶರಣಗೌಡ ಪಾಟೀಲ್ ,ಶ್ರೀಶೈಲ್ ಮಾಳಗೆ ಸೋಮು ರಾಠೋಡ್ ಕಾಲೇಜಿನ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ELC ನೋಡಲ್ ಅಧಿಕಾರಿ, ಪ್ರಾಂಶುಪಾಲ ಚಂದ್ರಕಾಂತ್ ಸನದಿ ಸ್ವಾಗತಿಸಿದರು. ಕಲಬುರಗಿ ತಾಲೂಕಿನ ELC ನೋಡಲ್ ಅಧಿಕಾರಿ ಪಾಂಡು ಎಲ್ ರಾಠೋಡ್ ನಿರೂಪಿಸಿದರು.