ಕಲಬುರಗಿ| ಅಂಗವಿಕಲ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ತಂದೆಯ ಬಂಧನ
ಕಲಬುರಗಿ : ತನ್ನ ಅಂಗವಿಕಲ ಮಗಳನ್ನು ಕೊಲೆಗೈದು, ಮಗಳು ಆತ್ಮಹತ್ಯೆ ಮಾಡಿಕೊಂದಿದ್ದಾಳೆ ಎಂದು ಬಿಂಬಿಸಿದ ತಂದೆಯೋರ್ವನನ್ನು ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ಕೊಲೆಯಾದ ಯುವತಿ. ಆಕೆಯನ್ನು ತಂದೆ ಗುಂಡೇರಾವ್ ಚಂದ್ರಶ್ಯಾ ನೀಲೂರು ಕೊಲೆ ಮಾಡಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಕಲ್ಲಹಂಗರಗಾ ಗ್ರಾಮದ ನಿವಾಸಿ ಗುಂಡೇರಾವ್ ತನ್ನ ಮಗಳು ಮಂಜುಳಾಳನ್ನು ಕೊಲೆಗೈದು ಆಕೆಯ ಕತ್ತಿಗೆ ಹಗ್ಗ ಬಿಗಿದಿದ್ದಾನೆ. ಮಗಳು ಪಕ್ಕದ ಜಮೀನಿನವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾನೆ. ಈ ಕುರಿತು ಕ್ಷಿಪ್ರ ತನಿಖೆ ನಡೆಸಿದ ಬಳಿಕ ಆತನೇ ಹತ್ಯೆಗೈದಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಮಗಳ ಕೊಲೆಯ ಬಗ್ಗೆ ಪಕ್ಕದ ಜಮೀನಿನವರ ಮೇಲೆ ಸಂಶಯವಿದೆ ಎಂದು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಮಂಜುಳಾ ತಾಯಿ ವಿಮಲಾಬಾಯಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ವಾಸ್ತವ ಬಯಲಾಗಿದೆ.
ಆರೋಪಿ ಗುಂಡೇರಾವ್ ನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ.