×
Ad

ಪ್ರಚೋದನಕಾರಿ ಹೇಳಿಕೆ ಖಂಡನೀಯ; ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಕ್ಷಮೆಯಾಚಿಸಲಿ: ಶಾಸಕ ಅಲ್ಲಂಪ್ರಭು ಪಾಟೀಲ್

Update: 2026-06-04 23:48 IST

 ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ: ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಅವರು ನೀಡಿರುವ ಹೇಳಿಕೆ ಕೋಮು ಭಾವನೆಗಳನ್ನು ಕೆರಳಿಸುವಂತಿದ್ದು, ಅದನ್ನು ಖಂಡಿಸುವುದಾಗಿ ಹಾಗೂ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಮಾತನಾಡಿದ ಅವರು, ಕೋಮು ಸೌಹಾರ್ದತೆಗೆ ಹೆಸರಾಗಿರುವ ಕಲಬುರಗಿಯಲ್ಲಿ ಸಮಾಜದ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಎಲ್ಲ ಸಮುದಾಯದ ಜನರು ಪರಸ್ಪರ ಸಹಬಾಳ್ವೆ ಮತ್ತು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಆಳಂದ ಗಲಭೆ ಪ್ರಕರಣ ರದ್ದತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ವರಿಷ್ಠರ ಗಮನ ಸೆಳೆದು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಳ್ಳುವ ಹುನ್ನಾರದೊಂದಿಗೆ ದತ್ತಾತ್ರೇಯ ಪಾಟೀಲ್ ಅವರು ಇಂತಹ ಹೇಳಿಕೆ ನೀಡಿರಬಹುದು ಎಂದು ಅಲ್ಲಂಪ್ರಭು ಪಾಟೀಲ್ ಟೀಕಿಸಿದರು.

ಮಾಜಿ ಸಚಿವ ಖಮರುಲ್ ಇಸ್ಲಾಂ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಜಾತ್ಯತೀತ ನಾಯಕರು. ಅವರು ತಮ್ಮ ಸಮುದಾಯದವರಿಗಷ್ಟೇ ಅಲ್ಲದೆ ಎಲ್ಲ ಸಮುದಾಯಗಳ ಮುಖಂಡರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸಿ ಬೆಳೆಸಿದ ವ್ಯಕ್ತಿಯಾಗಿದ್ದರು. ಭೀಮರೆಡ್ಡಿ ಪಾಟೀಲ್ ಸೇರಿದಂತೆ ಅನೇಕ ನಾಯಕರು ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದಾರೆ ಎಂದು ಅವರು ಸ್ಮರಿಸಿದರು.

ಖಮರುಲ್ ಇಸ್ಲಾಂ ಅವರು ಕಲಬುರಗಿಯನ್ನು "ಮಿನಿ ಪಾಕಿಸ್ತಾನ" ಮಾಡಲು ಬಯಸಿದ್ದರು ಎಂಬ ರೀತಿಯ ಆರೋಪಗಳು ವಾಸ್ತವಕ್ಕೆ ದೂರವಾಗಿದ್ದು, ಇಂತಹ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಮಾತುಗಳು ಸಾರ್ವಜನಿಕ ಜೀವನದಲ್ಲಿರುವ ನಾಯಕರಿಂದ ಬರಬಾರದು. ದತ್ತಾತ್ರೇಯ ಪಾಟೀಲ್ ಅವರ ತಂದೆಯವರೂ ಶಾಸಕರಾಗಿದ್ದು, ಅವರು ಎಂದಿಗೂ ಸಮಾಜದಲ್ಲಿ ವಿಭಜನೆ ಉಂಟುಮಾಡುವ ಪ್ರಯತ್ನ ಮಾಡಿರಲಿಲ್ಲ. ಆದ್ದರಿಂದ ದತ್ತಾತ್ರೇಯ ಪಾಟೀಲ್ ಅವರು ಇತಿಹಾಸದ ಅರಿವಿನೊಂದಿಗೆ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಅಲ್ಲಂಪ್ರಭು ಪಾಟೀಲ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News