ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಕನ್ನಡ ನಾಡಿನ ನಿರ್ಮಾತೃ: ತೇಗಲತಿಪ್ಪಿ
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೇಯರ್ ಅವರ 142 ನೇ ಜನ್ಮದಿನಾಚರಣೆ ಕಾರ್ಯಕ್ರಮ ಗುರುವಾರದಂದು ಜಿಲ್ಲಾ ಕಸಾಪದ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಆದರ್ಶ ರಾಜ್ಯದ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿರುವ ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸುವ ಮೂಲಕ ಕನ್ನಡಿಗರನ್ನು ಒಂದುಗೂಡಿಸಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಝಿರುದ್ದಿನ್ ಮುತ್ತವಲ್ಲಿ, ಪ್ರಮುಖರಾದ ಶರಣರಾಜ ಛಪ್ಪರಬಂದಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಧೂಳಪ್ಪ ದ್ಯಾಮನಕರ್, ಜ್ಯೋತಿ ಕೋಟನೂರ್, ನಾಗರಾಜ ಮೈಲ್ವಾರ್, ರಂಗೋಲಿ, ರಾಜಶೇಖರ ಚಿಂಚೋಳಿ ಸೇರಿದಂತೆ ಅನೇಕರು ಉಪಸ್ಥಿತರಿದರು.
ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರನ್ನು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸಲಿಕ್ಕೆ ಮಾತ್ರ ಸೀಮಿತಗೊಳಿಸದೆ, ಅವರನ್ನು ಮತ್ತಷ್ಟು ಪರಿಷತ್ತಿನ ಚಟುವಟಿಕೆಗಳಲ್ಲಿ ಭಾಗಿ ಯಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪರಿಷತ್ತಿನ ಸರ್ವ ಸದಸ್ಯರ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು. ಇದು ಮತ್ತೊಂದು ಹೊಸ ಪ್ರಯೋಗ ಎಂದು ಭಾವಿಸಿದ್ದೇವೆ.
-ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಧ್ಯಕ್ಷರು, ಜಿಲ್ಲಾ ಕಸಾಪ