ಅಫಜಲಪುರ | ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಕಠಿಣ ಕ್ರಮ: ಡಾ. ಬಾಲರಾಜ ಬಿರಾದಾರ
ಅಫಜಲಪುರ: ಹತ್ತಿ ಬೀಜ ಖರೀದಿಸುವ ರೈತರು ಅಧಿಕೃತ ಆಗ್ರೋ ಕೇಂದ್ರಗಳಿಂದ ಮಾತ್ರ ಬೀಜಗಳನ್ನು ಖರೀದಿಸಬೇಕು. ಖಾಸಗಿ ವ್ಯಕ್ತಿಗಳಿಂದ ಯಾವುದೇ ಕಾರಣಕ್ಕೂ ಬೀಜ ಖರೀದಿಸಬಾರದು ಎಂದು ಕೃಷಿ ಉಪನಿರ್ದೇಶಕ ಡಾ. ಬಾಲರಾಜ ಬಿರಾದಾರ ರೈತರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ನಕಲಿ ಹತ್ತಿ ಬೀಜಗಳು ರಾಜ್ಯಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ರೈತರು ಜಾಗರೂಕರಾಗಿ ಅಧಿಕೃತ ಮಾರಾಟ ಕೇಂದ್ರಗಳಿಂದಲೇ ಬೀಜ ಖರೀದಿಸಬೇಕು ಎಂದು ಸಲಹೆ ನೀಡಿದರು.
ಆಗ್ರೋ ಕೇಂದ್ರಗಳ ಮಾಲಕರು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಬೀಜ ಅಥವಾ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ಅವರ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಅವರು, ರೈತರಿಗೆ ಕಡ್ಡಾಯವಾಗಿ ಖರೀದಿ ರಸೀದಿ ನೀಡಬೇಕು ಎಂದು ಸೂಚಿಸಿದರು. ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು ಮತ್ತು ಉದ್ದು ಬೀಜಗಳ ಮಾರಾಟ ಈಗಾಗಲೇ ಆರಂಭಗೊಂಡಿದ್ದು, ಈ ಬಾರಿ ಬೀಜದ ಕೊರತೆ ಇಲ್ಲ ಎಂದು ತಿಳಿಸಿದರು.
ಅಲ್ಪ ಪ್ರಮಾಣದ ಮಳೆಯಾದ ತಕ್ಷಣ ಬಿತ್ತನೆಗೆ ಮುಂದಾಗದೆ, ಸಮರ್ಪಕ ಮಳೆ ಬಿದ್ದು ಭೂಮಿಯಲ್ಲಿ ತೇವಾಂಶ ಹೆಚ್ಚಾದ ಬಳಿಕವೇ ಬಿತ್ತನೆ ಕೈಗೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಬೀಜ ಮತ್ತು ರಸಗೊಬ್ಬರ ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಹಾಗೂ ಮಾರಾಟಗಾರರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಕಳಪೆ ಅಥವಾ ನಕಲಿ ಬೀಜ ಪೂರೈಕೆ ಕಂಡುಬಂದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ತಾಲೂಕಿನಲ್ಲಿ ಸದ್ಯ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ ಎಂದು ತಿಳಿಸಿದ ಅವರು, ಕಾಳಸಂತೆಯಲ್ಲಿ ಬೀಜ ಮಾರಾಟ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದರು. ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಅಂಗಡಿಗಳ ಮುಂದೆ ದರಪಟ್ಟಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ಸಹಾಯಕ ಕೃಷಿ ಅಧಿಕಾರಿ ಎಸ್.ಎಚ್. ಗಡಗಿಮನಿ ಮಾತನಾಡಿ, ರಸಗೊಬ್ಬರದ ಚೀಲಗಳ ಮೇಲೆ ಮುದ್ರಿಸಿರುವ ದರವನ್ನು ಪರಿಶೀಲಿಸಿ ಅದೇ ದರಕ್ಕೆ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು. ರೈತರು ರಸಗೊಬ್ಬರಗಳನ್ನು ಸಮತೋಲಿತ ಪ್ರಮಾಣದಲ್ಲಿ ಬಳಸಬೇಕು ಹಾಗೂ ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಂಗಡಿ ಮಾಲಕರು ರೈತರೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಳೇಂದ್ರ ಡಾಂಗೆ ಮಾತನಾಡಿ, ರೈತರಿಗೆ ಯಾವುದೇ ತೊಂದರೆ ಆಗದಂತೆ ಕೃಷಿ ಇಲಾಖೆ ಅಗತ್ಯ ಪ್ರಮಾಣದಲ್ಲಿ ಬೀಜ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರಿಂದ ಹೆಚ್ಚುವರಿ ಹಣ ಪಡೆದು ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಕಲಿ ಬೀಜ ಮತ್ತು ರಸಗೊಬ್ಬರಗಳ ಮಾರಾಟ ತಡೆಯಲು ಜಾಗೃತಿ ಹಾಗೂ ಕಟ್ಟುನಿಟ್ಟಿನ ನಿಗಾವಹಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಸದಸ್ಯರು, ರೈತ ಮುಖಂಡರು, ಆಗ್ರೋ ಮಾಲೀಕರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.