Kalaburagi | ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ
ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ
ಕಲಬುರಗಿ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ನಡೆಯಿತು. ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅಧಿಕಾರಿಗಳು ಪೊರಕೆ ಹಿಡಿದು ಆವರಣದಲ್ಲಿ ಕಸಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರರಾದ ಗಂಗಾಧರ, ಪಂಪಯ್ಯ, ಶಿವಪ್ರಭು ಹಿರೇಮಠ ಸೇರಿದಂತೆ ಕಚೇರಿ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿ ಶ್ರಮದಾನದಲ್ಲಿ ಭಾಗವಹಿಸಿ ಸಂಪೂರ್ಣ ಆವರಣವನ್ನು ಸ್ವಚ್ಛಗೊಳಿಸಿದರು.
ಸಭಾಂಗಣ ಕಾಮಗಾರಿ ವೀಕ್ಷಣೆ :
ನಂತರ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಮಿನಿ ವಿಧಾನಸೌಧ ಆವರಣದಲ್ಲಿರುವ ವಿವಿಧ ಕಚೇರಿಗಳಿಗೆ ಭೇಟಿ ನೀಡಿದರು. ಆವರಣದಲ್ಲಿ ನಡೆಯುತ್ತಿರುವ ಜಿ+2 ಮಾದರಿಯ ಸಭಾಂಗಣದ ಕಾಮಗಾರಿಯನ್ನೂ ವೀಕ್ಷಿಸಿ, ಅದರ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಿನಿ ವಿಧಾನಸೌಧಕ್ಕೆ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಅಲ್ಲಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ವಾಹನ ಪಾರ್ಕಿಂಗ್ ಹಾಗೂ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಉದ್ಯಾನವನವನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.