×
Ad

ಜನರ ಕಲ್ಯಾಣಕ್ಕೆ ಸರಕಾರ ಬದ್ಧ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

Update: 2026-01-20 14:22 IST

ಕಲಬುರಗಿ: ಅಭಿವೃದ್ಧಿ ಎನ್ನುವುದು ನಿರಂತರವಾಗಿ ಸಾಗುವ ಪ್ರಕ್ರಿಯೆ. ನಮ್ಮ ಸರ್ಕಾರವು ಜನರ ಕಲ್ಯಾಣಕ್ಕಾಗಿ ಸದಾ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು.

ಸೇಡಂ ಮತಕ್ಷೇತ್ರದ ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಸಚಿವರಾಗಿ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಬಡವರ ಮತ್ತು ರೈತರ ಪರವಾದ ಯೋಜನೆಗಳು ಹಾಗೂ ಕಾನೂನುಗಳಿಗೆ ಕೇಂದ್ರ ಸರ್ಕಾರವು ಕೊಡಲಿ ಪೆಟ್ಟು ನೀಡುತ್ತಿದೆ. ಕೇಂದ್ರ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಟೀಕಿಸಿದರು.

ಬೆನಕನಹಳ್ಳಿ ಗ್ರಾಮದಲ್ಲಿ ಈಗಾಗಲೇ ನಡೆದಿರುವ ಮತ್ತು ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅವರು ಮಾಹಿತಿ ನೀಡಿದರು. 2023-24ನೇ ಸಾಲಿನಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಸದ್ಯ ಮತ್ತೆ 10 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ದೇವಮ್ಮ ಗುಡಿ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಿ ಕೆಲಸ ಮಾಡಿಸಲಾಗಿದೆ ಎಂದರು.

ಅಲ್ಲದೆ, 9 ಕೋಟಿ ರೂ. ವೆಚ್ಚದಲ್ಲಿ ಹೊಡೆಬೀರನಳ್ಳಿ-ಗಡಿಕೇಶ್ವಾರ ರಸ್ತೆ ಅಭಿವೃದ್ಧಿ ಹಂತದಲ್ಲಿದೆ. ನಿಡಗುಂದ, ಪೋತಂಗಲ, ಜಟ್ಟೂರ್ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಾಲ ಭವನ ವಿಕಾಸ ಸೊಸೈಟಿ ಉಪಾಧ್ಯಕ್ಷರಾದ ಅನೀಲ್ ಕುಮಾರ ಜಮಾದಾರ, ವಿಶ್ವನಾಥ ಪಾಟೀಲ್, ಶಿವಶಂಕರ ರೆಡ್ಡಿ, ಜೀಶಾನ್ ಅಲಿ ಪಟ್ಟೆದಾರ, ಶರಣುಪಾಟೀಲ್ ಮೋತ್ಕಪಳ್ಳಿ, ಶಿವಕುಮಾರ ಸಜ್ಜನ್, ಶರಣುಕುಮಾರ ದೇಸಾಯಿ, ರಾಮಲಿಂಗ ನಾಟಿಕಾರ, ಶಾಂತಕುಮಾರ ಗುತ್ತೇದಾರ, ಮಸ್ತಾನ್ ಪಟೇಲ್, ಉಸ್ಮಾನ್ ಮಿಯ್ಯ ಪಟ್ಟೆದಾರ, ಶಾಮರಾವ ಹೊಸಮನಿ, ಅರುಣಕುಮಾರ ದೇಸಾಯಿ, ರವಿಕುಮಾರ ಕೊರಡಂಪಳ್ಳಿ, ಜಗಯ್ಯ ಸ್ವಾಮಿ, ಸಿದ್ದು ಗೌನೂರ, ಮಹಾದೇವಪ್ಪ ಪಾಟೀಲ್, ಯುಸುಫ್ ಪಟೇಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News