ಕಲಬುರಗಿ | ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಶಿಕ್ಷಣ: ಪ್ರೊ.ಆರ್.ಕೆ.ಹುಡಗಿ
ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ
ಕಲಬುರಗಿ : ನಗರದ ಹೊರವಲಯದ ಪಟ್ಟಣ ಕ್ರಾಸ್ ಸಮೀಪ ಇರುವ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಅತ್ಯಂತ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಚಿಂತಕರಾದ ಪ್ರೊ.ಆರ್.ಕೆ.ಹುಡಗಿ ಅವರು ಮಾತನಾಡಿ, ಅಜೀಂ ಪ್ರೇಮ್‌ಜಿ ಶಾಲೆಯ ಶಿಕ್ಷಣದ ವ್ಯವಸ್ಥೆ ಮೌಲ್ಯಯುತವಾಗಿದೆ. ಮಕ್ಕಳು ಚಟುವಟಿಕೆಗಳ ಮೂಲಕ ಕಲಿಯುತ್ತಾರೆ, ಪ್ರಶ್ನೆ ಕೇಳಲು ಹೆದರಲ್ಲ, ಕವನ–ಕಾದಂಬರಿಗಳಂತಹ ಬರವಣಿಗೆಯ ಮೂಲಕ ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಗೌರವ ಅತಿಥಿ ಯಾದಗಿರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಮಾತನಾಡಿ, ಇಂದಿನ ಮಕ್ಕಳ ಮನಸ್ಸು ಗೊಂದಲದಗೂಡಾಗಿದೆ. ನಿರ್ದಿಷ್ಟವಾದ ಗುರಿ ಇಲ್ಲ, ಮೊಬೈಲ್ ಫೋನ್‌ಗಳ ಬಳಕೆ ಮಕ್ಕಳ ಗಮನವನ್ನು ಎಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಲೆಯ ಅಧ್ಯಕ್ಷರಾದ ಡಾ.ರುದ್ರೇಶ್ ಎಸ್ ಅವರು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಅಜೀಂ ಪ್ರೇಮ್‌ಜಿ ಪೌಂಢೇಶನ್ ಕಲಬುರಗಿ ಜಿಲ್ಲಾ ಮುಖ್ಯಸ್ಥ ಗ್ಲ್ಯಾಂಡಸನ್ ಎಮ್.ಇ. ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲರಾದ ರಾಜಶ್ರೀ ನಾಯಕ್ ಶಾಲಾ ವಾರ್ಷಿಕೋತ್ಸವ ವರದಿಯನ್ನು ಮಂಡಿಸಿ ಎಲ್ಲರಿಗೂ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ಶಾಲೆಯ ಪ್ರಾಂಶುಪಾಲ ಅನಿಲ್ ಅಂಗಡಿ, ಯಾದಗಿರಿ ಜಿಲ್ಲಾ ಸಂಸ್ಥೆಯ ಮುಖ್ಯಸ್ಥ ಸಚಿನ್ ಸೋಲಂಕಿ, ಶಿಕ್ಷಕರಾದ ರಮೇಶ್, ಶಿವಶರಣಪ್ಪ, ಶ್ರೀದೇವಿ, ವಿನೋದ್, ಭರತ, ಕಾವ್ಯಶ್ರೀ, ಅಂಜಲದೇವಿ, ಶರಣ್ ಕುಮಾರ್, ನಿಂಗಪ್ಪ ಇತ್ಯಾದಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಅರ್ಪಿಸಲಾಗಿದ್ದು, ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಮನೋಹರವಾಗಿ ಪ್ರದರ್ಶಿಸಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನೃತ್ಯ–ನಾಟಕಗಳು ಹಾಗೂ ಮೈಮ್‌ಗಳ ಮೂಲಕ ವಿದ್ಯಾರ್ಥಿಗಳು ಪಾಲಕರ ಮನಸ್ಸುಗಳನ್ನು ಮಂತ್ರಮುಗ್ಧರಾಗಿಸಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರುತಿ, ಯಕ್ಷಿತಾ ಹಾಗೂ ಬಸಯ್ಯಸ್ವಾಮಿ ನಿರೂಪಿಸಿದರು. ಸುಮಾರು 1,500ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು ಎಂದು ಶಾಲಾ ಶಿಕ್ಷಕರಾದ ರಮೇಶ್ ರಾಠೋಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.