ಆಳಂದ| ತೊಗರಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ನಡೆಸುತ್ತಿದ್ದ ಧರಣಿ ತಾತ್ಕಾಲಿಕ ಸ್ಥಗಿತ
ಆಳಂದ: ತಾಲೂಕಿನ ತಡೋಳಾ ಗ್ರಾಮದಲ್ಲಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ತೊಗರಿಯನ್ನು ಪ್ರತಿ ಕ್ವಿಂಟಾಲಿಗೆ 10 ಸಾವಿರ ರೂ.ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಸೋಮವಾರ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಹಾಗೂ ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ ತೆರಳಿ ಸ್ಥಳೀಯ ಮಟ್ಟದ ಬೇಡಿಕೆಗಳನ್ನು ಈಡೇರಿಸಲಾಗುವುದು ಹಾಗೂ ಉಳಿದ ಬೇಡಿಕೆಗಳನ್ನು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು. ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಒಂದು ದಿನಕ್ಕೆ ಹಿಂದಕ್ಕೆ ಪಡೆಯಲಾಯಿತು.
ಈ ವೇಳೆ ಮಾತನಾಡಿದ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಕಳೆದ ಐದು ವರ್ಷಗಳಿಂದ ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆಯಡಿ ತಡೋಳಾ ಗ್ರಾಮದಲ್ಲಿ ಪ್ರಾರಂಭಗೊಂಡ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ತೊಗರಿ ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 7,000ಕ್ಕೆ ಮಾತ್ರ ತೊಗರಿ ಮಾರಾಟವಾಗುತ್ತಿದೆ. ಸರಕಾರ 8,000 ಬೆಲೆ ನಿಗದಿಪಡಿಸಿದ್ದರೂ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಇದರಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮೌಲಾ ಮುಲ್ಲಾ ಹೇಳಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ತಾಲೂಕು ಉಪಾಧ್ಯಕ್ಷೆ ಕಲ್ಯಾಣಿ ಅವುಟೆ, ತಾಲೂಕು ಉಪಾಧ್ಯಕ್ಷ ರಾಜಶೇಖರ ಬಸ್ಮೆ ಹಿರೋಳಿ, ಮಹಾದೇವ ಪೂಜಾರಿ, ತುಕಾರಾಮ ಕುಂಬಾರ, ರಮೇಶ ಅವುಟೆ, ಫಕ್ರುದ್ದೀನ್ ಗೋಳಾ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.